ಮಂಗಳೂರು, ಮಾ.21 (Daijiworld News/MB) : ಜನರ ಜೀವಕ್ಕಿಂತ ಯಾವುದೂ ಮುಖ್ಯವಲ್ಲ, ಹೀಗಾಗಿ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕಾಸರಗೋಡು ಮಾತ್ರವಲ್ಲದೆ ಇತರ ಜಿಲ್ಲಾ ಗಡಿಗಳನ್ನೂ ಬಂದ್ ಮಾಡುವ ಬಗ್ಗೆ ಚಿಂತನೆ ಮಾಡಲಾಗಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, "ಕೇರಳದಿಂದ ಮಂಗಳೂರಿಗೆ ಬರುವ 17 ರಸ್ತೆಗಳಿವೆ 17 ರಸ್ತೆಗಳೂ ಇಂದಿನಿಂದ ಸಂಪೂರ್ಣ ಬಂದ್ ಮಾಡಲಾಗಿದೆ. ತಲಪಾಡಿ ಗಡಿಭಾಗದಲ್ಲಿ ಅವಶ್ಯ ವಸ್ತುಗಳ ಸಾಗಾಟ ವಾಹನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಕೇರಳದಿಂದ ಬರುವ ರೈಲುಗಳ ತಪಾಸಣೆ, ರೈಲ್ವೇ ನಿಲ್ದಾಣದಲ್ಲೇ ತಪಾಸಣೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ. ಜನರ ಜೀವಕ್ಕಿಂತ ಯಾವುದೂ ಮುಖ್ಯವಲ್ಲ. ಮುಂದಿನ ದಿನಗಳಲ್ಲಿ ಬೇರೆ ಜಿಲ್ಲಾ ಗಡಿಗಳನ್ನೂ ಬಂದ್ ಮಾಡುವ ಬಗ್ಗೆ ಚಿಂತನೆ ಮಾಡಲಾಗಿದೆ ಎಂದು ಹೇಳಿದರು.
ಸಾರ್ವಜನಿಕರು ಮುಂದಿನ ಕ್ರಮಗಳಿಗೆ ಸಹಕಾರ ಮಾಡಬೇಕು. ಈವರೆಗೆ 89 ಶಂಕಿತ ಪ್ರಕರಣಗಳು ದ.ಕ ಜಿಲ್ಲೆಯಲ್ಲಿ ಕಂಡುಬಂದಿತ್ತು. 89 ಪ್ರಕರಣಗಳ ವರದಿ ಬಂದಿದ್ದು, ಎಲ್ಲಾ ವರದಿಗಳು ನೆಗೆಟಿವ್ ಬಂದಿದೆ ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆ ವೆಂಟಿಲೇಟರ್ ಬಳಕೆ ಮಾಡಲು ನಿರ್ಧಾರ ಮಾಡಿದ್ದೇವೆ. ಜನತಾ ಕರ್ಫ್ಯೂಗೆ ಜನರು ಪಕ್ಷ ಬೇಧ ಮರೆತು ಬೆಂಬಲ ನೀಡಿದ್ದಾರೆ. ಜಿಲ್ಲೆಯಲ್ಲಿ ಜಾಗರೂಕತೆಯಿಂದ ಹೆಜ್ಜೆ ಇಡಬೇಕಾದ ಪರಿಸ್ಥಿತಿ ಇದೆ. ಮದುವೆ ಕಾರ್ಯಕ್ರಮ ಮುಂದೂಡುವ ಬದಲು ಕುಟುಂಬಿಕರಷ್ಟೇ ಸೇರಿ ಮಾಡಲಿ. ಒಂದು ವೇಳೆ ಜನ ಸೇರಿಸಿ ಮಾಡಿದರೆ ಕಠಿಣ ಕ್ರಮ ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾಗುತ್ತದೆ ಎಂದರು.