ಮಂಗಳೂರು, ಮಾ.21 (DaijiworldNews/PY) : ಕೊರೊನಾ ಭೀತಿ ನಡುವೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಹಾಗೂ ಶಾಸಕ ಯು.ಟಿ ಖಾದರ್ ಅವರು ಹರೇಕಳದಲ್ಲಿ ನೇತ್ರಾವತಿ ನದಿಗೆ ರೂ. 174 ಕೋಟಿ ವೆಚ್ಚದಲ್ಲಿ ಸೇತುವೆ ಸಹಿತ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ.
ದೇಶದಾದ್ಯಂತ ಸಾಂಕ್ರಾಮಿಕವಾಗಿ ವ್ಯಾಪಿಸುತ್ತಿರುವ ಕೊರೊನಾ ವೈರಸ್ನ ಹಬ್ಬುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಹೆಚ್ಚು ಜನ ಸೇರಿ ಸಾರ್ವಜನಿಕ ಸಭೆ ನಡೆಸದಂತೆ ಆದೇಶಿಸಿದ್ಧಾರೆ. ಈ ನಡುವೆ, ಹರೇಕಳದಲ್ಲಿ ನೇತ್ರಾವತಿ ನದಿಗೆ ರೂ. 174 ಕೋಟಿ ವೆಚ್ಚದಲ್ಲಿ ಸೇತುವೆ ಸಹಿತ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಶಾಸಕ ಯು.ಟಿ ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ ಅವರು ಶಿಲಾನ್ಯಾಸ ಮಾಡಿದ್ದು, ಅದೇ ಕಾರ್ಯಕ್ರಮದಲ್ಲಿ ಕೊರೊನಾ ವೈರಸ್ ಜಾಗೃತಿ ಭಿತ್ತಿಪತ್ರ ಬಿಡುಗಡೆ ಮಾಡಿದ್ಧಾರೆ.
ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆಯ ವತಿಯಿಂದ ನಡೆಯುತ್ತಿರುವ ಮಂಗಳೂರು ಕ್ಷೇತ್ರದ ಅತಿ ದೊಡ್ಡ ಕಾಮಗಾರಿ ಇದಾಗಿದ್ದು, ಈ ಅಣೆಕಟ್ಟು ಮೂಲಕ ಕ್ಷೇತ್ರದ ಜನರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಇದಾಗಿದೆ.