ಬೆಳ್ತಂಗಡಿ, ಮಾ.21 (DaijiworldNews/PY) : ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ನಾವೂರು ಗ್ರಾಮದ ಓಡಿಕಾರು ಎಂಬಲ್ಲಿ ಮಾ.19ರಂದು ಅಕ್ರಮವಾಗಿ ನಡೆಯುತ್ತಿದ್ದ ಕಪ್ಪುಕಲ್ಲು ಗಣಿಗಾರಿಕೆ ಮಾಡುತ್ತಿದ್ದ ಪ್ರದೇಶಕ್ಕೆ ಬೆಳ್ತಂಗಡಿ ತಾಲ್ಲೂಕು ತಹಶಿಲ್ದಾರವರು ದಾಳಿ ನಡೆಸಿ ಸ್ಥಳದಲ್ಲಿದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದು, ಶನಿವಾರ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ತಾಲೂಕು ಲಾಯಿಲಾ ನಿವಾಸಿ ಪ್ರತೀಕ್ ಸಾಲ್ಯಾನ್ ಹಾಗೂ ಬೆಳ್ತಂಗಡಿ ತಾಲೂಕು ಸುಲ್ಕೆರೆ ನಿವಾಸಿ ಅಣ್ಣಪ್ಪ ಎಂದು ಗುರುತಿಸಲಾಗಿದೆ.
ದಾಳಿ ನಡೆಸಿದ ಸಂದರ್ಭ ಸ್ಥಳದಲ್ಲಿದ್ದ ಕೆಲಸಗಾರರು ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಜಿಲೆಟಿನ್ ಕಡ್ಡಿಗಳು, 11 ವೈರ್ ಜೀವಂತ ಮದ್ದುಗಳು, ಚೀಲದಲ್ಲಿ 15 ಜಿಲೆಟಿನ್ ಕಡ್ಡಿಗಳು, ಕೆಲಸಕ್ಕೆ ಬಳಸಿದ ಟ್ರಾಕ್ಟರ್, ಎರಡು ಇಟಾಚಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ವಶ ಪಡಿಸಿಕೊಂಡ ಸೊತ್ತುಗಳ ಮೌಲ್ಯ ಸುಮಾರು 25 ಲಕ್ಷ ರೂ. ಅಂದಾಜಿಸಲಾಗಿದ್ದು, ಈ ಕುರಿತು ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದೆ.