ಫೆ.22: ನಾಲ್ಕು ದಿನಗಳ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದ ಹಿರಿಯ ರೈತ ಮುಖಂಡ ಕೆಎಸ್ ಪುಟ್ಟಣ್ಣಯ್ಯನವರ ಅಂತ್ಯ ಸಂಸ್ಕಾರ ಫೆ.22ರ ಗುರುವಾರ ಮಧ್ಯಾಹ್ನ ನೆರವೇರಿತು. ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿರುವ ಅವರ ತೋಟದ ಜಮೀನಿನಲ್ಲಿ ಸರಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಯಾವುದೇ ವಿಧಿವಿಧಾನವಿಲ್ಲದೇ ಸರಳವಾಗಿ ನಡೆದ ಈ ಅಂತ್ಯಸಂಸ್ಕಾರಕ್ಕೆ ರಾಜ್ಯದ ಮೂಲೆ ಮೂಲೆಯಿಂದಲೂ ಲಕ್ಷಾಂತರ ರೈತರು, ಅಭಿಮಾನಿಗಳು ಕುಟುಂಬ ಸದಸ್ಯರು ಅಂತ್ಯಸಂಸ್ಕಾರಕ್ಕೆ ಸಾಕ್ಷಿಯಾದರು. ಹಲವು ಜಿಲ್ಲೆಗಳಿಂದ ಪಾರ್ಥಿವ ಶರೀರದ ದರ್ಶನಕ್ಕೆ ಬಂದಿದ್ದ ರೈತರು ತಮ್ಮ ನೆಲದಿಂದ ಹಿಡಿ ಮಣ್ಣು ತಂದು ಪುಟ್ಟಣ್ಣಯ್ಯ ಅವರ ಪಾರ್ಥಿವ ಶರೀರಕ್ಕೆ ಅರ್ಪಿಸಿದರು. ಜಿಲ್ಲಾಡಳಿತವು ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ಅರ್ಪಿಸಿತು. ಅಂತ್ಯಸಂಸ್ಕಾರದ ಅಂತಿಮ ಕ್ಷಣಗಳಲ್ಲೂ ಅಭಿಮಾನಿಗಳು ಪುಟ್ಟಣ್ಣಯ್ಯಗೆ ಜೈಕಾರ ಹಾಕುತ್ತಿದ್ದರು.
ಜಿಲ್ಲಾಧಿಕಾರಿ ಎನ್. ಮಂಜುಶ್ರೀ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳದಲ್ಲಿದ್ದು ಸರ್ಕಾರಿ ಗೌರವ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಂ. ಕೃಷ್ಣಪ್ಪ ಸೇರಿದಂತೆ ಹಲವು ಶಾಸಕರು, ಮುಖಂಡರು, ರೈತ ನಾಯಕರು ಭಾಗಿಯಾಗಿದ್ದರು.ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ಯೋಗೇಂದ್ರ ಯಾದವ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.