ಬೆಳ್ತಂಗಡಿ, ಮಾ.21 (DaijiworldNews/PY) : ಭೂ ವಿಜ್ಞಾನ ಮತ್ತು ಗಣಿ ಇಲಾಖೆಯವರು ನೀಡಿದ ಅನುಮತಿಯನ್ನು ದುರುಪಯೋಗ ಮಾಡಿ ಮರಳು ತೆಗೆಯಲಾಗುತ್ತಿದೆ ಎಂದು ಆರೋಪಿಸಿ ಶುಕ್ರವಾರ ಕಲ್ಮಂಜ ಹಾಗೂ ಮುಂಡಾಜೆ ಪರಿಸರದ ಮೂಲಾರು ಎಂಬಲ್ಲಿ ಸ್ಥಳೀಯರು ಮರಳು ಸಾಗಾಟ ಲಾರಿಯನ್ನು ತಡೆ ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ಮಳೆಗಾಲದಲ್ಲಿ ಪ್ರಕೃತಿ ವಿಕೋಪದಿಂದ ನೆರೆ ಹಾವಳಿಯಿಂದಾಗಿ ನದಿ ಭಾಗದ ಪ್ರದೇಶದ ತೋಟಗಳಿಗೆ ನೀರಿನ ಜೊತೆ ಮರಳು ತುಂಬಿಕೊಂಡಿತ್ತು. ಇದರ ತೆರವಿಗೆ ಅನುಮತಿಯನ್ನು ಇಲಾಖೆ ನೀಡಿತ್ತು ಎನ್ನಲಾಗಿದ್ದು, ಮೂಲಾರು ಪರಿಸರದಲ್ಲಿ ಮೃತ್ಯುಂಜಯ ನದಿಯಲ್ಲಿ ಬಂದು ಬಿದ್ದಿರುವ ಮರಳನ್ನು ಮಾತ್ರ ತೆಗೆಯಲಾಗುತ್ತಿದ್ದು, ತೋಟದಿಂದ ಮರಳು ತೆಗೆಯುತ್ತಿಲ್ಲ. ನದಿಯಿಂದ ಮಾತ್ರ ಮರುಳು ಸಾಗಾಟ ಮಾಡಲಾಗುತ್ತಿದೆ ಎಂದು ಸ್ಥಳೀಯರ ಆರೋಪವಾಗಿದೆ.
ಮರಳು ಸಾಗಾಟದ ಲಾರಿಗಳು ಗ್ರಾಮೀಣ ಭಾಗದ ರಸ್ತೆಯಲ್ಲೂ ವಿಪರೀತ ವೇಗದಿಂದ ಸಂಚರಿಸುತ್ತಿದೆ. ಅದಕ್ಕೆ ಕಡಿವಾಣ ಹಾಕಬೇಕು, ರಸ್ತೆ ಹಾಳಾದರೆ ಅದನ್ನು ರಿಪೇರಿ ಮಾಡಿಕೊಡಬೇಕು ಇನ್ನಿತರ ವಿಷಯಗಳನ್ನು ಮುಂದಿರಿಸಿ, ಪ್ರತಿಭಟಿಸಿದರು. ಕಂದಾಯ ಇಲಾಧಿಕಾರಿಗಳು ಮತ್ತು ಭೂ ವಿಜ್ಞಾನ ಗಣಿ ಇಲಾಖೆಯವರು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದರು. ಮಾಹಿತಿ ತಿಳಿದ ಧರ್ಮಸ್ಥಳ ಪೊಲೀಸರು, ಮುಂಡಾಜೆ ಹಾಗೂ ಕಲ್ಮಂಜ ಗ್ರಾಮದ ಪಂಚಾಯತ್ ಪಿಡಿಒಗಳು, ಗ್ರಾಮಕರಣಿಕರು ಸ್ಥಳಕ್ಕಾಗಮಿಸಿದ್ದರು.
ಸ್ಥಳೀಯರಿಗೂ ಹಾಗೂ ಮರಳು ಸಾಗಾಟ ಮಾಡುವವರಿಗೂ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳು ಗ್ರಾಮಸ್ಥರ ಬೇಡಿಕೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಇಲ್ಲಿನ ಕುರಿತು ವರದಿ ನೀಡುವುದಾಗಿ ತಿಳಿಸಿದ ಬಳಿಕ ತಡೆ ಹಿಡಿಯಲಾಗಿದ್ದ ಲಾರಿಗಳನ್ನು ಬಿಡಲು ಸ್ಥಳೀಯರು ಒಪ್ಪಿಗೆ ಸೂಚಿಸಿದರು. ಮುಂಡಾಜೆ ಹಾಗೂ ಕಲ್ಮಂಜ ಗ್ರಾಮಗಳ ಗ್ರಾಮಕರಣಿರಾದ ರಾಘವೇಂದ್ರ, ಕಲ್ಮಂಜ ಗ್ರಾ.ಪಂ. ನ ಪಂ.ಅಭಿವೃದ್ದಿ ಅಧಿಕಾರಿ ಸಫಾನಾ, ಮುಂಡಾಜೆ ಗ್ರಾ. ಪಂ. ನ ಪಂ.ಅಭಿವೃದ್ದಿ ಅಧಿಕಾರಿ ಸುಮಾ ಎ.ಎಸ್, ಸ್ಥಳೀಯ ಜನಪ್ರತಿನಿಧಿಗಳು ಇದ್ದರು. ಬಳಿಕ ಮರಳುಗಾರಿಕೆ ಸ್ಥಳಕ್ಕೆ ತೆರಳಿದ ಅಧಿಕಾರಿ ವರ್ಗದವರು ಸ್ಥಳ ಪರಿಶೀಲಿಸಿ, ಮರಳುಗಾರಿಕೆಯಿಂದ ಉಂಟಾಗಿರುವ ಮಾಲಿನ್ಯದ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ.