ಕಾಸರಗೋಡು, ಮಾ.22 (Daijiworld News/MB) : ಕೊರೊನಾ ವೈರಸ್ ಕಾಸರಗೋಡಿನಲ್ಲಿ ವ್ಯಾಪಿಸುತ್ತಿದ್ದು ಶನಿವಾರ ಮತ್ತೆ ಆರು ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದೀಗ ಕಾಸರಗೋಡಿನಲ್ಲಿ ಸೋಂಕಿತರ ಸಂಖ್ಯೆ ೧೪ ಕ್ಕೆ ಏರಿಕೆಯಾಗಿದೆ.
ಶುಕ್ರವಾರ ಆರು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಸೋಂಕಿತರ ಪೈಕಿ ಅಧಿಕ ಮಂದಿ ವಿದೇಶದಿಂದ ಭಾರತಕ್ಕೆ ಮರಳಿದವರಾಗಿದ್ದಾರೆ.
ಶನಿವಾರ ಸೋಂಕು ದೃಢಪಟ್ಟವರನ್ನು ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಕೇರಳದಲ್ಲಿ ಒಟ್ಟಾರೆಯಾಗಿ ಶನಿವಾರದಂದು 12 ಜನರಲ್ಲಿ ಸೋಂಕು ಪತ್ತೆಯಾಗಿದ್ದು ಕೇರಳ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 52 ಕ್ಕೆ ಏರಿಕೆಯಾಗಿದೆ.
ಕೇರಳದಲ್ಲಿ ಶನಿವಾರ ಒಟ್ಟು 12 ಜನರಲ್ಲಿ ಸೋಂಕು ಪತ್ತಯಾಗಿದ್ದು ಈ ಪೈಕಿ ಆರು ಜನರು ಕಾಸರಗೋಡಿನವರು, ಮೂವರು ಕಣ್ಣೂರಿನವರಾಗಿದ್ದು ಮೂವರು ಎರ್ನಾಕುಲಂ ಜಿಲ್ಲೆಯವರಾಗಿದ್ದಾರೆ. ಒಟ್ಟು 694 ಜನರನ್ನು ನಿಗಾದಲ್ಲಿ ಇರಿಸಲಾಗಿದ್ದು ಈ ಪೈಕಿ 15 ಜನರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ನಿರ್ಬಂಧ ಹೇರಿದ್ದು ಈ ಹಿನ್ನಲೆಯಲ್ಲಿ ಕಾಸರಗೋಡಿನಲ್ಲಿ ಬಂದ್ನ ವಾತಾವರಣ ಸೃಷ್ಟಿಯಾಗಿದೆ. ಕರ್ನಾಟಕಕ್ಕೆ ಬರುವ ಗಡಿ ಭಾಗದಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ.
ಕಾಸರಗೋಡು ಜಿಲ್ಲಾಡಳಿತವು ಸೋಂಕಿತರ ರೂಟ್ ಮ್ಯಾಪ್ ಅನ್ನೂ ಕೂಡಾ ಬಿಡುಗಡೆ ಮಾಡಿದೆ.