ಕುಂದಾಪುರ, ಮಾ.22 (DaijiworldNews/PY) : ಮೀನು ವಹಿವಾಟಿನ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಕುಂದಾಪುರದ ಉದ್ಯಮಿಯ ಕೊಲೆಗೆ ಯತ್ನಿಸಿದ ಆರೋಪದ ಹಿನ್ನೆಲೆ ಮಹಾರಾಷ್ಟ್ರದ ರತ್ನಾಗಿರಿ ಮೂಲದ ನಾಲ್ವರನ್ನು ಕುಂದಾಪುರ ಎಸ್ಐ ಹರೀಶ್ ಆರ್. ನೇತೃತ್ವದ ತಂಡ ಶುಕ್ರವಾರ ತಡರಾತ್ರಿ ಬಂಧಿಸಿದ್ದು, ಎ.4ರವರೆಗೆ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪ್ರಕರಣದ ಪ್ರಮುಖ ರೂವಾರಿ ದಾನೀಶ್ ಪಾಟೀಲ್(34), ಆತನ ಸಹಚರರಾದ ಆಸೀಮ್ ಖಾಜಿ (39), ಮುಕದ್ದರ್ ಜಮಾದರ್ ಅಕ್ರಮ್ (34) ಹಾಗೂ ಪ್ರಸಾದ್ ವಿಜಯ್ (47) ಬಂಧಿತರು. ಇವರು ಮರವಂತೆಯ ಮಹಮ್ಮದ್ ಶಾಕೀರ್ ಎಂಬವರ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಮ್ಮದ್ ಶಾಕೀರ್ ಎಂಬವರು ಮೀನು ಮಾರಾಟ ವಹಿವಾಟು ನಡೆಸುತ್ತಿದ್ದು, ಸುಮಾರು 2 ವರ್ಷಗಳಿಂದ ರತ್ನಾಗಿರಿ ಮೂಲದ ದಾನೀಶ್ ಪಾಟೀಲ್ ಜೊತೆ ವ್ಯವಹಾರ ಮಾಡುತ್ತಿದ್ದರು. ಎಲ್ಲಾ ವ್ಯವಹಾರ ಸರಿಯಾಗಿದ್ದರೂ ಶಾಕೀರ್ ತನಗೆ 50 ಲಕ್ಷ. ರೂ ಕೊಡುವುದು ಬಾಕಿಯಿದೆ ಎಂದು ಆತ ಹಾಗೂ ಆತನ ತಂದೆಗೆ ದಾನೀಶ್ ಆಗಾಗ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ. ಮಾ.20ರ ಬೆಳಗ್ಗೆ ಸುಮಾರು 10.30ಕ್ಕೆ ಶಾಕೀರ್ ವಾಸವಿದ್ದ ಹಂಗಳೂರಿನ ಅಪಾರ್ಟ್ಮೆಂಟ್ ಬಳಿ ಬಂದ ದಾನೀಶ್ ಹಾಗೂ ಮತ್ತೋರ್ವ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು, ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ್ದರು. ತಾನು ಹಣ ಕೊಡಲು ಬಾಕಿಯಿಲ್ಲ ಎಂದು ಶಾಕೀರ್ ಹೇಳಿದರು. ಆಗ ಆರೋಪಿಗಳು, ತಾವು ಸಮೀಪದ ಲಾಡ್ಜ್ನಲ್ಲಿ ರೂಂ ಮಾಡಿದ್ದು, ಅಲ್ಲಿಗೆ ಬಂದರೆ ಬಾಕಿ ಹಣದ ಲೆಕ್ಕ ನೀಡುತ್ತೇವೆ ಎಂದು ಹೇಳಿ ಹೋಗಿದ್ದರು.
ಶುಕ್ರವಾರ ರಾತ್ರಿ ಶಾಕೀರ್ ಸ್ನೇಹಿತ ಸುಹೈಲ್ನೊಂದಿಗೆ ಕಾರ್ನಲ್ಲಿ ಕುಂದಾಪುರ ಕಡೆಗೆ ಬರುತ್ತಿದ್ಧಾಗ ದಾನೀಶ್ ಹಾಗೂ ಇತರ ಮೂವರು ಕಾರನ್ನು ಅಡ್ಡಗಟ್ಟಿದ್ದಾರೆ. ಆಗ ಕೆಳಗಿಳಿದ ಶಾಕೀರ್ನನ್ನು ಕೊಲ್ಲುವ ಉದ್ದೇಶದಿಂದ ನಾಲ್ವರೂ ಚಾಕುವಿನಿಂದ ಹೊಟ್ಟೆ ಭಾಗಕ್ಕೆ ಬೀಸಿದ್ದು, ಶಾಕೀರ್ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ತಕ್ಷಣವೇ ಶಾಕೀರ್ ಮನೆಗೆ ತೆರಳಿ ವಿಚಾರ ತಿಳಿಸಿ ನಂತರ ಕುಂದಾಪುರ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ತಕ್ಷಣವೇ ಎಸ್ಐ ಹರೀಶ್ ಹಾಗೂ ತಂಡ ಆರೋಪಿಗಳ ಪತ್ತೆಗೆ ಮುಂದಾಯಿತು. ಶಾಕೀರ್ ನೀಡಿದ ಮಾಹಿತಿಯಂತೆ, ಆರೋಪಿಗಳು ತಂಗಿದ್ದ ಲಾಡ್ಜ್ಗೆ ತೆರಳಿದರು. ಆಗ ಆರೋಪಿಗಳು ತಮ್ಮ ಝೈಲೋ ಕಾರ್ನಲ್ಲಿ ಪರಾರಿಯಾಗಲು ಯತ್ನಿಸಿದ್ದು, ಬೆನ್ನಟ್ಟಿದ ಪೊಲೀಸರು ಕೋಟೇಶ್ವರ ಸಮೀಪ ಅವರನ್ನು ಬಂಧಿಸಿದರು.
ಎಸ್ಪಿ. ವಿಷ್ಣುವರ್ಧನ್, ಕುಂದಾಪುರ ಉಪವಿಭಾಗದ ಎಎಸ್ಪಿ. ಹರಿರಾಂ ಶಂಕರ್, ಸಿಐ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಎಸ್ಐ ಹರೀಶ್. ಆರ್, ಎಎಸ್ಐ ಸುಧಾಕರ್, ಹೆಡ್ ಕಾನ್ಸ್ಟೇಬಲ್ಗಳಾದ ಮಂಜು, ಸಂತೋಷ್, ರಾಜು ನಾಯ್ಕ್, ರಾಘವೇಂದ್ರ, ಸಿಬ್ಬಂದಿ ವರ್ಗದ ಅಶ್ವಿನ್, ಶಾಂತರಾಮ, ರಾಮ ಗೌಡ, ಮಾರುತಿ, ರವಿ, ಶಂಕರ್, ರಾಘವೇಂದ್ರ ಮೊಗೇರ, ಸಚಿನ್ ಹಾಗೂ ಪ್ರಸನ್ನ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.