ಕಾರ್ಕಳ, ಮಾ.22 (DaijiworldNews/PY) : ತಾಲೂಕು ವ್ಯಾಪ್ತಿಯಲ್ಲಿ ಜನತಾ ಕರ್ಫ್ಯೂಗೆ ವ್ಯಾಪಕ ಬೆಂಬಲ ದೊರೆತಿದೆ.
ವಿಶ್ವವನ್ನೇ ಬೆರಗುಗೊಳಿಸಿದ ಕೊರೊನಾ ವೈರಸ್ ಬಡಿದೋಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜನತಾ ಕರ್ಫ್ಯೂಗೆ ಕರೆ ನೀಡಿದರು.
ಕಾರ್ಕಳ ಬಂಡೀಮಠ ಬಸ್ ನಿಲ್ದಾಣದಲ್ಲಿ, ವಿಸ್ತೃತ ಬಸ್ನಿಲ್ದಾಣದಲ್ಲಿ ಬಸ್ಗಳಿಲ್ಲದೇ, ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿತ್ತು. ಒಂದೆರಡು ಆಟೋರಿಕ್ಷಾಗಳು ಕಾರ್ಕಳದ ಬಸ್ಸು ನಿಲ್ದಾಣದಲ್ಲಿ ನಿಂತಿರುವುದು ಕಂಡು ಬಂತು. ಪ್ರಮುಖ ರಸ್ತೆಯಲ್ಲಿ ಜನಸಂಚಾರ ಬೆರೆಳೆಣಿಕೆಯಲ್ಲಿ ಇತ್ತು. ಅಂಗಡಿ ಮುಗ್ಗಟ್ಟು ಮುಚ್ಚಿಕೊಂಡಿತ್ತು. ದೇವಸ್ಥಾನಗಳು ಬಾಗಿಲು ಮುಚ್ಚಲಾಗಿತ್ತು. ಮಸೀದಿಯಲ್ಲಿ ನಸುಕಿನ ಜಾವದಲ್ಲಿ ಪ್ರಾರ್ಥನೆಯ ಬಳಿಕ ಬಾಗಿಲು ಮುಚ್ಚಲಾಗಿತ್ತು. ಚರ್ಚ್ಗಳಲ್ಲಿ ನಡೆಯುತ್ತಿದ್ದ ಭಾನುವಾರದ ವಿಶೇಷ ಪೂಜೆ ರದ್ದುಗೊಳಿಸಲಾಗಿತ್ತು.
ಗಾಂಧಿ ಮೈದಾನದಲ್ಲಿ ಯುವಕರ ತಂಡ ರಾಜಾರೋಷವಾಗಿ ಕ್ರಿಕೆಟ್ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದರು. ಕಾರ್ಕಳದ ಎಲ್ಲಾ ಪೆಟ್ರೋಲ್ ಬಂಕ್ಗಳು ಬಂದ್ ಆಗಿದ್ದು, ಕೇವಲ ಒಂದು ಪೆಟ್ರೋಲ್ ಬಂಕ್ನಲ್ಲಿ ವ್ಯವಹಾರ ನಡೆಯುತ್ತಿದ್ದುದು ಕಂಡುಬಂತು. ಕಾರ್ಕಳದ ಮುಖ್ಯ ಮಾರುಕಟ್ಟೆಯಲ್ಲಿ ಸಂಪೂರ್ಣ ವ್ಯವಹಾರ ಸ್ಥಗಿತಗೊಂಡು ಯುವಕರು ಮಾರುಕಟ್ಟೆ ಒಳಗೆ ಆಟದಲ್ಲಿ ನಿರತರಾಗಿದ್ದು ಕಂಡುಬಂತು.