ಪುತ್ತೂರು, ಮಾ.22 (DaijiworldNews/PY) : ಸಾಮಾಜಿಕ ಜಾಲತಾಣದಲ್ಲಿ ಮೋದಿ ವಿರೋಧಿಗಳನ್ನು ಭೇಟಿ ಮಾಡಿ ಹೋಗು ಕೊರೊನಾ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ ಎಂದು ಆರೋಪಿಸಿ ಪುತ್ತೂರು ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಸುರೇಶ್ ಪುತ್ತೂರಾಯ ಎಂಬುವವರ ವಿರುದ್ದ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ.
ನರಿಮೊಗರು ಗ್ರಾಮದ ಪುರುಷರಕಟ್ಟೆ ನಿವಾಸಿ ಪಿ.ಬಿ.ಕೆ.ಇಬ್ರಾಹೀಂ ಎಂಬವರು ಈ ದೂರು ನೀಡಿದ್ದು, ಕೊರೊನಾ ವೈರಸ್ ವಿಚಾರವಾಗಿ ಡಾ. ಸುರೇಶ್ ಪುತ್ತೂರಾಯ ಸಾಮಾಜಿಕ ಜಾಲತಾಣದಲ್ಲಿ ವಿಕೃತವಾಗಿ ಬರೆದು ವೈದ್ಯಕೀಯ ಕ್ಷೇತ್ರಕ್ಕೆ ಅಪಚಾರ ಮಾಡಿದ್ದಾರೆ, ಅವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀಸ್ ದೂರಿನಲ್ಲಿ ಇಬ್ರಾಹಿಂ ಅವರು ತಿಳಿಸಿದ್ಧಾರೆ.
ಪ್ರೀತಿಯ ಕೊರೊನಾ, ಹೇಗಿದ್ದರೂ ಬಂದಿದ್ದೀಯ. ಮೋದಿ ವಿರೋಧಿಗಳನ್ನು ಬಂದು ಭೇಟಿ ಮಾಡಿ ಹೋಗು. ಇಲ್ಲವಾದರೆ ಅವರೆಲ್ಲರೂ ಸಾಕ್ಷಿ ಕೇಳುತ್ತಾರೆ ಎನ್ನುವ ಸಂದೇಶವನ್ನು ಡಾ. ಸುರೇಶ್ ಪುತ್ತೂರಾಯ ಅವರು ಬರೆದಿದ್ದಾರೆ. ಅವರ ಬರೆದ ಸಂದೇಶ ನನಗೆ ಪಾರ್ವರ್ಡ್ ಆಗಿ ಬಂದಿದೆ. ಈ ಸಂದೇಶ ರವಾನಿಸಿದ ಆರೋಪಿ ಪುತ್ತೂರಿನಲ್ಲಿ ವೈದ್ಯರಾಗಿ ಸಾಮಾಜಿಕ, ರಾಜಕೀಯ ಪ್ರಬಲರಾಗಿದ್ದಾರೆ. ಈ ರೀತಿಯಾದ ಸಂದೇಶ ಪ್ರಚೋದನಕಾರಿಯಾಗಿದೆ. ಇವರು ರವಾನಿಸಿರುವ ಈ ಸಂದೇಶವನ್ನು ಓದಿ ಅದರಿಂದ ಪ್ರಚೋದನೆಗೊಂಡು ಕೋಮುಗಲಭೆ ಆಗುವ ಸಾಧ್ಯತೆಯಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಆರೋಪಿಯು ಕೋಮು ಪ್ರಚೋದನೆಯ ಸಂದೇಶವನ್ನು ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಹಾಗಾಗಿ ಆರೋಪಿಯ ವಿರುದ್ದ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.