ಮಂಗಳೂರು, ಮಾ 22 (DaijiworldNews/SM): ಮಂಗಳೂರಿನಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಎಲ್ಲೆಡೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮಾರ್ಚ್ 31ರ ತನಕ ಇಂದಿನಂತೆ ಬಂದ್ ಇರಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲ್ಯಾಬ್ ಗೆ ಒಟ್ಟು 104 ಸ್ಯಾಂಪಲ್ ಗಳನ್ನು ಕಳುಹಿಸಲಾಗಿತ್ತು. ಇದರಲ್ಲಿ 15 ರಿಪೋರ್ಟ್ ಬರಲು ಬಾಕಿ ಇದೆ. ಇಲ್ಲಿಯ ತನಕ ಬಂದ ರಿಪೋರ್ಟ್ ನಲ್ಲಿ ಇವತ್ತು ಒಂದು ಪಾಸಿಟಿವ್ ಪ್ರಕರಣ ಕಂಡುಬಂದಿದೆ. ಪಾಸಿಟಿವ್ ವ್ಯಕ್ತಿ ಯುವಕನಾಗಿದ್ದಾನೆ. ಚಿಕಿತ್ಸೆ ಗೆ ಸ್ಪಂದಿಸುವ ವಿಶ್ವಾಸವನ್ನು ವೈದ್ಯರು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮಂಗಳೂರು ಸ್ತಬ್ದ:
ಇನ್ನು ಮಂಗಳೂರಿನಲ್ಲಿ ಇಂದಿನಿಂದ ಜನರು ಗುಂಪಾಗಿ ಸೇರಬಾರದು. ಎಲ್ಲರೂ ಮನೆಯಲ್ಲೇ ಇರಬೇಕು. ತೀರಾ ಅಗತ್ಯವಾದ್ರೆ ಮಾತ್ರ ರಸ್ತೆಗೆ ಬರಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಅಗತ್ಯಬಿದ್ರೆ ಪೊಲೀಸರ ಮೂಲಕ ನಿಯಂತ್ರಣ ಮಾಡಲಾಗುತ್ತದೆ. ವಿದೇಶದಿಂದ ಬಂದವರು ಮನೆಯಲ್ಲೇ ಇರಬೇಕು. ಹೊರಗೆ ಬಂದಲ್ಲಿ ಪೊಲೀಸರಿಗೆ ದೂರು ನೀಡಬೇಕು. ಪೊಲೀಸರು ಅವರನ್ನು ಹದ್ದುಬಸ್ತಿನಲ್ಲಿ ಇಡುತ್ತಾರೆ ಎಂದು ದ.ಕ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.