ಮಂಗಳೂರು, ಫೆ 23: ಮತದಾರರ ಮನವೊಲಿಸಲು ಪಕ್ಷಗಳು ಕಸರತ್ತು ಆರಂಭಿಸಿದ್ದು, ಈ ನಡುವೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾರರಿಗೆ ಸೀರೆ ಹಂಚಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಹಿಳೆಯರಿಗೆ ಶಾಸಕ ಮೊಯ್ದೀನ್ ಬಾವಾ ಸೀರೆ ಹಂಚುತ್ತಿದ್ದ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಾಸಕ ಮೊಯ್ದೀನ್ ಬಾವಾ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುರುಪುರ ಎಂಬಲ್ಲಿ ಮನೆಗಳಿಗೆ ಹಕ್ಕುಪತ್ರ ವಿತರಿಸಿ ಸೀರೆ ಹಂಚಿದ್ದಾರೆ ಎಂದು ಆರೋಪಿಸಲಾಗಿದೆ.
ಗುರುಪುರದ ಪ್ರತಿ ಮನೆ ಮನೆಗೆ ತೆರಳಿ ಶಾಸಕ ಬಾವಾ ಸೀರೆ ಹಂಚಿದ್ದು, ಇದರ ವಿರುದ್ದ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಭಾರೀ ಚರ್ಚೆ ಆರಂಭವಾಗಿದ್ದು ಬಿಜೆಪಿ ಮುಖಂಡರು ಬಾವಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.