ಮಂಗಳೂರು, ಮಾ 22 (DaijiworldNews/SM): ರೋಗಿಯೊಬ್ಬರು ಆಸ್ಪತ್ರೆಯ ಬೆಡ್ ಮೇಲೆ ಮಲಗಿ ನರಳಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದರೊಂದಿಗೆ ವೆನ್ಲಾಕ್ ಜಿಲ್ಲಾಸ್ಪತ್ರೆಯ ವೀಡಿಯೋ ಎಂಬುವುದಾಗಿ ತಪ್ಪು ಸಂದೇಶ ರವಾನಿಸಲಾಗುತ್ತಿದೆ. ಸುಳ್ಳು ಸುದ್ದಿ ಪಸರಿಸುವವರ ವಿರುದ್ಧ ಕ್ರಮಕ್ಕೆ ಪೊಲೀಸ್ ಇಲಾಖೆಗೆ ದೂರು ನೀಡಲಾಗುವುದೆಂದು ವೆನ್ಲಾಕ್ ಅಧೀಕ್ಷಕಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ವೆನ್ಲಾಕ್ ಜಿಲ್ಲಾಸ್ಪತ್ರೆಯ ಹೆಸರನ್ನು ದುರುಪಯೋಗಪಡಿಸಲಾಗುತ್ತಿದೆ. ವೀಡಿಯೋದಲ್ಲಿರುವ ದೃಶ್ಯ ವೆನ್ಲಾಕ್ ಆಸ್ಪತ್ರೆಯದ್ದಲ್ಲ. ಇಂತಹ ಘಟನೆ ನಮ್ಮಲ್ಲಿ ನಡೆದಿಲ್ಲ. ಇನ್ನು ದೃಶ್ಯದಲ್ಲಿ ಕಂಡುಬರುವಂತೆ ನೀಲಿಬಣ್ಣದ ಹಾಸಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಂತಹ ತಪ್ಪು ಸಂದೇಶಗಳಿಂದ ವೆನ್ ಲಾಕ್ ಆಸ್ಪತ್ರೆಯ ಬಗ್ಗೆ ತಪ್ಪು ಮಾಹಿತಿಗಳನ್ನು ಜನತೆಗೆ ನೀಡಿದಂತಾಗುತ್ತದೆ. ಯಾರೂ ಕೂಡ ಇಂತಹ ಕಾರ್ಯಗಳನ್ನು ನಡೆಸಬಾರದು. ಯಾವುದೇ ವ್ಯಕ್ತಿಯಾಗಿರಲಿ ಅತನ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಸೋಮವಾರದಂದು ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.