ವಿಟ್ಲ, ಮಾ.23 (Daijiworld News/MB) : ಜಿಲ್ಲಾಧಿಕಾರಿ ಆದೇಶದಂತೆ ಕೊರೊನಾ ತಡೆಗಟ್ಟಲು ಕರ್ನಾಟಕ ಕೇರಳ ಗಡಿ ಭಾಗವಾದ ಕಲ್ಲಡ್ಕ - ಕಾಂಞಂಗಾಡು ಅಂತರ್ ರಾಜ್ಯ ಹೆದ್ದಾರಿಯ ಸಾರಡ್ಕದಲ್ಲಿ ರಸ್ತೆ ಬಂದ್ ಮಾಡಿದ ಪೊಲೀಸರಿಗೆ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಪೆರ್ಲ ಸಮೀಪದ ನಲ್ಕ ನಿವಾಸಿ ರಾಘವೇಂದ್ರ ರಾವ್ (50) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಮಧ್ಯಾಹ್ನ 2 ಗಂಟೆಯಿಂದ ಕೇರಳದಿಂದ ಕರ್ನಾಟಕದ ದಕ್ಷಿಣ ಕನ್ನಡ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಮುಚ್ಚಲು ಜಿಲ್ಲಾಡಳಿತ ಆದೇಶ ನೀಡಿತ್ತು. ಅದರಂತೆ ಪೊಲೀಸ್ ಇಲಾಖೆಯೂ ಚೆಕ್ಪೋಸ್ಟ್ಗಳನ್ನು ಮುಚ್ಚಿ ವಾಹನಗಳನ್ನು ವಾಪಸ್ ಕಳುಹಿಸುತ್ತಿತ್ತು. ಬೆಳಗ್ಗಿನಿಂದಲ್ಲೇ ಅಡ್ಯನಡ್ಕದಿಂದ ಕೇರಳಕ್ಕೆ ಪ್ಯಾಕೆಜ್ ಹಾಲು ವಿತರಿಸುವ ನೆಪದಲ್ಲಿ ಸ್ಕೂಟರಿನಲ್ಲಿ ಹಲವು ಬಾರಿ ಸಂಚರಿಸಿದ್ದ ಈತನಿಗೆ ಮಧ್ಯಾಹ್ನ 2 ರ ಬಳಿಕ ವಾಹನ ಸಂಚಾರ ಇಲ್ಲ ಎಂದು ಪೊಲೀಸರು ತಿಳಿಸಿದ್ದರು.
ಆದರೆ ಅವರು ಅದನ್ನು ನಿರ್ಲಕ್ಷ್ಯ ಮಾಡಿ, ಗೇಟ್ ಬಂದ್ ಮಾಡಿದ ಬಳಿಕ ಅಡ್ಯನಡ್ಕಕ್ಕೆ ಹೋಗಲು ಬಿಡಬೇಕೆಂದು ಹೇಳಿ ಗಲಾಟೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಸಂಜೆ ವಿಟ್ಲ ಠಾಣಾಧಿಕಾರಿ ಜೊತೆಗೆ ಮಾತನಾಡಿ ಅಡ್ಕನಡ್ಕದಲ್ಲಿ ಅಂಗಡಿ ಇರುವ ಕಾರಣದಿಂದಾಗಿ ವಾಹನ ಸಂಚಾರ ಮಾಡಲು ಅನುವು ಮಾಡಿಕೊಡಬೇಕೆಂದು ಹೇಳಿದ್ದ.
ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರೂ ರಾತ್ರಿ ಚೆಕ್ಪೋಸ್ಟ್ ಸಿಬ್ಬಂದಿಗೆ ಬೆದರಿಕೆ ಹಾಕಿ ಸೇರಿದ್ದ ಜನರನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿ, ಗೇಟ್ ತೆರೆಯಲು ಯತ್ನಿಸಿದ್ದ. ಈ ಹಿನ್ನಲೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಆತನನ್ನು ಬಂಧನ ಮಾಡಲಾಗಿದೆ.