ಮಂಗಳೂರು, ಮಾ 23 (Daijiworld News/MSP): ಮಂಗಳೂರಿನಲ್ಲಿ ಕೊರೊನಾ ವೈರಸ್ ಧೃಡಪಟ್ಟ ಹಿನ್ನೆಲೆಯಲ್ಲಿ ಅಂತರ್ ಜಿಲ್ಲಾ ಗಡಿಗಳನ್ನು ಈಗಾಗಲೇ ಬಂದ್ ಮಾಡಲಾಗಿದೆ. ಕಾಸರಗೋಡು ಜಿಲ್ಲೆಯ ಗಡಿಗಳನ್ನು ಈ ಹಿಂದೆಯೇ ಬಂದ್ ಮಾಡಲಾಗಿದೆ. ಆದರೆ ಸೋಮವಾರದಿಂದ ಕರಾವಳಿಯ ದ.ಕ - ಉಡುಪಿ ಜಿಲ್ಲೆಗಳ ಗಡಿಗಳಲ್ಲೂ ನಿಷೇಧ ಹೇರಲಾಗಿದ್ದು, ಅತ್ತಿಂದಿತ್ತ ಜನ ಓಡಾಡದಂತೆ ನಿರ್ಬಂದ ಹೇರಲಾಗಿದೆ. ಆದರೆ ಇದರ ಅರಿವಿಲ್ಲದೆ ಉಡುಪಿಯಿಂದ ಮಂಗಳೂರಿಗೆ ಮಂಗಳೂರಿನಿಂದ ಉಡುಪಿಗೆ ಓಡಾಡುವ ಜನರು ಹೆಜಮಾಡಿ ಬಳಿ ಬರುತ್ತಿದ್ದಂತೆ ಪೊಲೀಸರು ರಸ್ತೆತಡೆ ಮಾಡಿದ್ದಾರೆ. ಮಂಗಳೂರಿನಿಂದ ಬರುವ ವಾಹನಗಳಿಗೆ ಉಡುಪಿ ಜಿಲ್ಲೆ ಪ್ರವೇಶಕ್ಕೆ ಅವಕಾಶವನ್ನು ನೀಡುತ್ತಿಲ್ಲ.
ಇದರ ಪರಿಣಾಮವಾಗಿ ಹೆಜಮಾಡಿ ಟೋಲ್ ಗೇಟ್ ಬಳಿ ಪ್ರಯಾಣಿಕರು ಪೊಲೀಸರ ಜೊತೆ ವಾಗ್ವಾದ ನಡೆಸುತ್ತಿರುವ ದೃಶ್ಯ ಬೆಳಗ್ಗಿನಿಂದ ಸಾಮಾನ್ಯವಾಗಿತ್ತು. ಟೋಲ್ ಗೇಟ್ ಬಳಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ದ್ವಿಚಕ್ರ ವಾಹನವೂ ಸೇರಿದಂತೆ ಯಾವುದೇ ವಾಹನಗಳನ್ನು ಗಡಿ ದಾಟಲು ಪೊಲೀಸರು ಬಿಡುತ್ತಿಲ್ಲ. ಇದರಿಂದಾಗಿ ಸಂಚಾರ ಸ್ಥಗಿತಗೊಂಡಿರುವ ಮಾಹಿತಿ ಇಲ್ಲದೆ ಹೊರಜಿಲ್ಲೆಯ ಪ್ರಯಾಣಿಕರು ಪರದಾಡುವಂತಾಯಿತು.
ರಸ್ತೆ ತಡೆದಿರುವ ಕಾರಣ ಹೆಜಮಾಡಿಯಲ್ಲಿ ತೀವ್ರ ವಾಹನದಟ್ಟಣೆ ಉಂಟಾಗಿದೆ. ಇನ್ನು ಜನರ ಒತ್ತಡ ತೀವ್ರಗೊಂಡ ಹಿನ್ನೆಲೆಯಲ್ಲಿ ಅನಿವಾರ್ಯಂತೆಗಳನ್ನು ಗಮನಿಸಿ ಕೆಲ ವಾಹನಗಳಿಗಷ್ಟೇ ನಿಷೇಧ ಸಡಿಲಿಕೆ ಮಾಡಿ ಉಡುಪಿ ಪ್ರವೇಶಕ್ಕೆ ಅನುಕೂಲಮಾಡಿಕೊಡಲಾಯಿತು.