ಮಂಗಳೂರು, ಮಾ. 23 (Daijiworld News/MB) : ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲಾಧಿಕಾರಿ ಸೆಕ್ಷನ್ 144 ರಲ್ಲಿ ನಿರ್ಬಂಧಕಾಜ್ಞೆಯನ್ನು ಹೊರಡಿಸಿದ್ದಾರೆ. ಇದನ್ನು ಉಲ್ಲಂಘಿಸಿ ಜನರು ಹೊರಬಂದಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಿ ಅಗತ್ಯ ಬಿದ್ದಲ್ಲಿ ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ. ಎಸ್. ಹರ್ಷಾ ಅವರು ಎಚ್ಚರಿಕೆ ನೀಡಿದ್ದಾರೆ.
ಯಾವುದಾದರೂ ವೈದ್ಯಕೀಯ ತುರ್ತು ಹೊರತು ಪಡಿಸಿ ಬೇರೆ ಯಾರೂ ಕೂಡಾ ಮನೆಯಿಂದ ಹೊರ ಬರುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಕೇವಲ ಅಗತ್ಯ ವಸ್ತುಗಳ ಖರೀದಿಗಾಗಿ ಮಾತ್ರ ಮನೆಯಿಂದ ಹೊರಗಡೆ ಬರಬೇಕು ಎಂದು ಸೂಚಿಸಿದ್ದಾರೆ.
ಕೊರೊನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟಲೆಂದು ಎಂದು ಈ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ನಮ್ಮ, ನಮ್ಮ ಕುಟುಂಬದವರ ಹಾಗೂ ನಾವು ಬದುಕುತ್ತಿರುವ ಸಮಾಕದ ಸ್ವಾಸ್ಥ್ಯದ ದೃಷ್ಟಿಯಿಂದ ನಾವು ಜಿಲ್ಲಾಡಳಿತದ ಆದೇಶವನ್ನು ನಾವೆಲ್ಲರೂ ಪಾಲಿಸೋಣ ಎಂದು ಹೇಳಿದ್ದಾರೆ.
ಹಾಗೆಯೇ ಮಂದಿರ, ಮದೀಸಿ ಚರ್ಚ್ ಮೊದಲಾದ ಎಲ್ಲಾ ಪ್ರಾರ್ಥನಾ ಸ್ಥಳಗಳ ಮುಖಂಡರೊಂದಿಗೆ ಜಿಲ್ಲಾಡಳಿತ ಮಾತನಾಡಿದ್ದು ಯಾವುದೇ ಪ್ರಾರ್ಥನಾ ಸ್ಥಳಗಳಲ್ಲಿ ಬೃಹತ್ ಸಂಖ್ಯೆಯ ಪ್ರಾರ್ಥನೆಗಳು ನಡೆಯುವುದಿಲ್ಲ. ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಯಾವುದೇ ಸರ್ಕಾರಿ, ಖಾಸಗಿ ಬಸ್ಗಳು ಸಂಚಾರ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.
ಯಾರದರೂ ಈ ನಿಯಮ ಉಲ್ಲಂಘನೆ ಮಾಡುವುದು ಗಮನಕ್ಕೆ ಬಂದಲ್ಲಿ ಅದನ್ನು ಪೊಲೀಸರಿಗೆ ತಿಳಿಸಿದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪ್ರಪಂಚದಾದ್ಯಂತ ಸಾವಿರಾರು ಜನರನ್ನು ಬಲಿ ಪಡೆದುಕೊಂಡ ಕೊರೊನಾ ವೈರಸ್ ಈಗ ಇಡೀ ದೇಶವೇ ಎದುರಿಸುತ್ತಿರುವ ಸವಾಲು, ಸರ್ಕಾರ ಈಗಾಗಲೇ ಎಲ್ಲಾ ಕ್ರಮ ಕೈಗೊಂಡು ನಮ್ಮ ನೆರವಿಗೆ ಧಾವಿಸಿದೆ. ಯಾರೂ ಕಳವಳ ಪಡುವ ಅಗತ್ಯವಿಲ್ಲ. ಆದರೆ ಇದು ನಮ್ಮೆಲ್ಲರ ಕರ್ತವ್ಯ, ಇದನ್ನು ನಾವೆಲ್ಲರೂ ಕೈಜೋಡಿಬೇಕು ಎಂದು ಹೇಳಿದ್ದಾರೆ.