ಕಾಸರಗೋಡು, ಫೆ 23 : ಚೀಮೇನಿ ಪುಲಿಯನ್ನೂರಿನ ನಿವೃತ್ತ ಶಿಕ್ಷಕಿ ಜಾನಕಿ ಯವರ ಕೊಲೆ ಮತ್ತು ದರೋಡೆ ಪ್ರಕರಣದ ಸೂತ್ರಧಾರನನ್ನು ತನಿಖಾ ತಂಡ ಬಂಧಿಸಿದೆ.
ಬಂಧಿತನನ್ನು ಅರುಣ್ ( 28) ಎಂದು ಗುರುತಿಸಲಾಗಿದೆ. ಕೃತ್ಯದ ಬಳಿಕ ಬಹರೈನ್ ಗೆ ತೆರಳಿದ್ದ ಈತನನ್ನು ಅಲ್ಲಿನ ಕೇರಳ ಮೂಲದ ಕೆಲ ಯುವಕರು ಹಿಡಿದು ಅಲ್ಲಿನ ಪೊಲೀಸರಿಗೆ ಒಪ್ಪಿಸಿದ್ದರು. ವಿಮಾನ ಮೂಲಕ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಬಂದಿಳಿದ ಅರುಣ್ ನನ್ನ ಪೊಲೀಸರು ಬಂಧಿಸಿದರು. ಇಂದು ಮಧ್ಯಾಹ್ನದ ವೇಳೆಗೆ ಕಾಸರಗೋಡಿಗೆ ಕರೆ ತಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಎರಡು ವರ್ಷಗಳಿಂದ ಬಹರೈನ್ ನಲ್ಲಿ ಉದ್ಯೋಗದಲ್ಲಿರುವ ಈತ ರಜೆಯಲ್ಲಿ ಊರಿಗೆ ಬಂದಿದ್ದು , ರಿನೇಶ್ ಮತ್ತು ವಿಶಾಖ್ ಜೊತೆ ಸೇರಿ ಕೃತ್ಯ ನಡೆಸಿದ್ದನು . ಈತ ಪ್ರಮುಖ ಆರೋಪಿ ಮತ್ತು ಸೂತ್ರಧಾರನಾಗಿದ್ದಾನೆ. ರಿನೇಶ್ ಮತ್ತು ವಿಶಾಖ್ ನನ್ನು ಗುರುವಾರ ಪೊಲೀಸರು ಬಂಧಿಸಿದ್ದರು. ಇದರಿಂದ ಪ್ರಕರಣದಲ್ಲಿ ಎಲ್ಲಾ ಮೂರು ಆರೋಪಿಗಳನ್ನು ಬಂಧಿಸಿದಂತಾಗುತ್ತದೆ. 2017 ರ ಡಿಸಂಬರ್ 13 ರಂದು ರಾತ್ರಿ ಕೃತ್ಯ ನಡೆದಿತ್ತು .