ಕಾಸರಗೋಡು, ಮಾ 23 (DaijiworldNews/SM): ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಇಮ್ಮಡಿಗೊಳ್ಳುತ್ತಿದೆ. ಸೋಮವಾರ 19 ಪ್ರಕರಣಗಳು ದೃಢಪಟ್ಟಿವೆ. ಕಳೆದ ಮೂರು ದಿನಗಳಲ್ಲಿ 17 ಪ್ರಕರಣಗಳು ಪತ್ತೆಯಾದರೆ ಇಂದು ಒಂದೇ ದಿನ ಮತ್ತೆ 19 ಪ್ರಕರಣಗಳು ದೃಢಗೊಂಡಿದ್ದು, ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 38ಕ್ಕೇರಿದೆ.
ಇನ್ನು ಕೇರಳ ರಾಜ್ಯದಲ್ಲಿ ಇಂದು 28 ಸೋಂಕು ಪ್ರಕರಣಗಳು ಖಚಿತಗೊಂಡಿದ್ದು, ಈ ಪೈಕಿ 19 ಪ್ರಕರಣಗಳು ಕಾಸರಗೋಡಿನದ್ದಾಗಿವೆ. ಈ ಮೂಲಕ ಕೇರಳದಲ್ಲಿ ಒಟ್ಟು 91 ಪ್ರಕರಣಗಳು ಇಲ್ಲಿಯ ತನಕ ದೃಢಗೊಂಡಿದೆ. ಪ್ರತಿನಿತ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನತೆ ಎಚ್ಚರಗೊಳ್ಳಬೇಕಾಗಿದ್ದು, ಅಗತ್ಯ ಇಲ್ಲದೆ ಮನೆಯಿಂದ ಹೊರ ಬಂದಲ್ಲಿ ಬಂಧನಕ್ಕೆ ಆದೇಶ ಹೊರಡಿಸಲಾಗಿದೆ.
ಎಲ್ಲಾ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಚಿಕಿತ್ಸೆ ನೀಡುವ ಆಸ್ಪತ್ರೆ ತೆರೆಯಲು ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲೆಯ 886 ಮಂದಿ ನಿಗಾದಲ್ಲಿದ್ದು, ಈ ಪೈಕಿ 61 ಮಂದಿ ಆಸ್ಪತ್ರೆಗಳಲ್ಲಿ ಹಾಗೂ ಉಳಿದವರು ಮನೆಯಲ್ಲಿ ನಿಗಾದಲ್ಲಿದ್ದಾರೆ. ಇಂದು 81 ಮಂದಿಯ ಸ್ಯಾಂಪಲ್ ಗಳನ್ನು ತಪಾಸಣೆಗೆ ಕಳುಹಿಸಲಾಗಿದೆ. ಇಂದು ಬಂದ 28 ಪ್ರಕರಣಗಳಲ್ಲಿ 19 ಕಾಸರಗೋಡು, ಕಣ್ಣೂರು ಐದು, ಪತ್ತನಂತಿಟ್ಟ ಒಂದು, ಎರ್ನಾಕುಲಂ ಇಬ್ಬರು, ತ್ರಿಶೂರು ಜಿಲ್ಲೆಯಲ್ಲಿ ಒಂದು ಪ್ರಕರಣ ದೃಢಗೊಂಡಿದೆ.
ಕೊರೋನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಇನ್ನಷ್ಟು ಐಸೋಲೇಷನ್ ಕೇಂದ್ರಗಳನ್ನು ತೆರೆಯಲಾಗಿದೆ. ಕಾಸರಗೋಡು ಜನರಲ್ ಆಸ್ಪತ್ರೆ, ಕಾಞಂಗಾಡ್ ಜಿಲ್ಲಾ ಆಸ್ಪತ್ರೆ, ಕಾಞಂಗಾಡ್ ಮದರ್ಸ್ ಆಸ್ಪತ್ರೆ, ಪೆರಿಯ ಓಲ್ಡ್ ರಿವರ್ ಸೈಡ್ ಟ್ರಾನ್ಸಿಸ್ಟ್ ಸೆಂಟರ್ ಪೆರಿಯ, ಓಲ್ಡ್ ಸರ್ಜಿ ಕೇರ್, ಕಾಸರಗೋಡು ಅರಮನ ಆಸ್ಪತ್ರೆ, ಕೇರ್ವೆಲ್ ಆಸ್ಪತ್ರೆ, ಉಳಿಯತ್ತಡ್ಕ ಚಿತ್ರ ಮೆಡಿಕಲ್ ಸೆಂಟರ್, ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರ, ಮಂಜೇಶ್ವರ ಆಸ್ಪತ್ರೆ, ಮಂಗಲ್ಪಾಡಿ ತಾಲೂಕು ಆಸ್ಪತ್ರೆಗಳನ್ನು ಐಸೋಲೇಷನ್ ಆಸ್ಪತ್ರೆ ಕೇಂದ್ರವಾಗಿ ತೆರೆಯಲಾಗಿದೆ.