ಮಂಗಳೂರು, ಮಾ 23 (DaijiworldNews/SM): ಕೊರೊನಾ ಮಾಹಾಮಾರಿ ಹಿನ್ನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಅಲರ್ಟ್ ಆಗಿದೆ. ದ.ಕ. ಜಿಲ್ಲೆಯಲ್ಲಿ 2448 ಮಂದಿ ಮನೆಯಲ್ಲಿ ನಿಗಾದಲ್ಲಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ಇಂದು ಒಟ್ಟು 104 ಮಂದಿಯನ್ನು ಸ್ಕ್ರೀನಿಂಗ್ಗೊಳಪಡಿಸಲಾಗಿದೆ. ಆದರೆ, ವೆನ್ಲಾಕ್ ಆಸ್ಪತ್ರೆಯ ವಾರ್ಡ್ನಲ್ಲಿ ಯಾರೂ ದಾಖಲಾಗಿಲ್ಲ. ಇಎಸ್ ಐ ಆಸ್ಪತ್ರೆಯ ಐಸೊಲೇಟೆಡ್ ವಾರ್ಡ್ ನಲ್ಲಿ 27ಮಂದಿ ನಿಗಾದಲ್ಲಿದ್ದಾರೆ. ಇನ್ನು 20ಮಂದಿ ಹೋಂ ಕ್ವಾರಂಟೈನ್ನಲ್ಲಿ 28 ದಿನಗಳ ನಿಗಾ ಪೂರೈಸಿದ್ದಾರೆ. ಈ ಪೈಕಿ 7 ಮಂದಿಯ ಸ್ಯಾಂಪಲ್ ಗಳು ತಪಾಸಣೆಗೆ ರವಾನಿಸಲಾಗಿದೆ. ಇನ್ನು ಈ ಹಿಂದೆ ಕಳುಹಿಸಿದ್ದ ಸ್ಯಾಂಪಲ್ ಗಳ ಪೈಕಿ 11 ಮಂದಿಯ ಪರೀಕ್ಷಾ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಇನ್ನು 12 ಮಂದಿಯ ಮೇಲೆ ವಿಶೇಷ ನಿಗಾ ಇರಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಆಶಾ ಕಾರ್ಯಕರ್ತೆಯರು ಮನೆ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಇಲ್ಲಿಯ ತನಕ 204012 ಮನೆಗಳಿಗೆ ಭೇಟಿ ನೀಡಿದ್ದು, 788545 ಮಂದಿಯನ್ನು ಸಂಪರ್ಕಿಸಿ ಜಾಗೃತಿ ಮೂಡಿಸುವಂತಹ ಕಾರ್ಯವನ್ನು ಮಾಡಿದ್ದಾರೆ. ಅಲ್ಲದೆ, ವಿದೇಶದಿಂದ ಬಂದವರನ್ನು ಮನೆಯಲ್ಲೇ ನಿಗಾದಲ್ಲಿರುವಂತೆ ತಿಳಿಸಿ ಆಶಾ ಕಾರ್ಯಕರ್ತೆಯರು ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿದ್ದಾರೆ.
ಇನ್ನು ನೆರೆಯ ಕಾಸರಗೋಡು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ಎಚ್ಚರದಿಂದಿರಬೇಕಿದೆ. ಜಿಲ್ಲೆಯಲ್ಲೂ ಕೂಡ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜನತೆ ಮನೆಯಿಂದ ಹೊರಬರದಂತೆ ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಮನೆಯಿಂದ ಅನಾವಶ್ಯಕವಾಗಿ ಹೊರ ಬಂದವರ ವಿರುದ್ಧ ಮುಲಾಜಿಲ್ಲದೆ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.