ಉಡುಪಿ, ಮಾ 23 (DaijiworldNews/SM): ಭಟ್ಕಳ ಮೂಲದ ವ್ಯಕ್ತಿಯಲ್ಲಿ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ವ್ಯಕ್ತಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸಿದ ಉಡುಪಿ ಮೂಲದ 21ಮಂದಿಯ ಮೇಲೆ ನಿಗಾ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ದುಬೈಯಿಂದ ಮಂಗಳೂರಿಗೆ ಆಗಮಿಸಿದ್ದ ಭಟ್ಕಳ ಮೂಲದ ವ್ಯಕ್ತಿಯಲ್ಲಿ ಕೊರೊನಾ ದೃಢಪಟ್ಟಿದ್ದು, ಮಂಗಳೂರಿನಲ್ಲಿ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಆ ವ್ಯಕ್ತಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸಿದ ಉಡುಪಿ ಜಿಲ್ಲೆಯ 21 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಬ್ರಹ್ಮಾವರ, ಬೈಂದೂರು, ಕುಂದಾಫುರ, ಕಾರ್ಕಳ, ಉಡುಪಿ ಮೂಲದ ಒಟ್ಟು 21 ಮಂದಿಯ ಮೇಲೆ ನಿಗಾ ಇಡಲಾಗಿದೆ. ಆ ಪ್ರಯಾಣಿಕರನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು ತಕ್ಷಣವೇ ಅವರನ್ನು ತಪಾಸಣೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮಾರ್ಚ್ 19ರಂದು ದುಬೈಯಿಂದ ಬಂದ ಭಟ್ಕಳ ಮೂಲದ ವ್ಯಕ್ತಿಯಲ್ಲೊ ಸೋಂಕು ದೃಢಪಟ್ಟಿದೆ. ಅಂದು ವಿದೇಶದಿಂದ ಬಂದ ಪ್ರಯಾಣಿಕರು ಮನೆಯಲ್ಲೇ ಇರುವುದು ಅಗತ್ಯವಾಗಿದ್ದು, ಸಂಬಂಧಿಸಿದ ಆರೋಗ್ಯ ಇಲಾಖೆಗೆ ವೈದ್ಯರಿಗೆ ಮಾಹಿತಿ ನೀಡಿ ತಪಾಸಣೆ ನಡೆಸುವ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸ್ವತಃ ಪ್ರಯಾನಿಕರೇ ಜಾಗೃತರಾಗಬೇಕಿದೆ. ಹಾಗೂ ಇಲಾಖೆಯೊಂದಿಗೆ ಸಹಕಾರ ನೀಡಬೇಕಿದೆ.