ಉಳ್ಳಾಲ, ಮಾ. 24 (Daijiworld News/MB) : ಮಧುಮೇಹ ಹಾಗೂ ರಕ್ತದೊತ್ತಡದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ತಲಪಾಡಿ ಪಂಜಾಳ ನಿವಾಸಿ ಮಹಿಳೆಯೊಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 2 ದಿನಗಳ ಹಿಂದೆ ಸಾವನ್ನಪ್ಪಿದ್ದು ಇಲಾಖಾಧಿಕಾರಿಗಳ ಸೂಚನೆಯಂತೆ ವರದಿ ಬಂದ ಬಳಿಕ ಸೋಮವಾರ ಅಂತ್ಯ ಸಂಸ್ಕಾರ ಮಾಡಲಾಯಿತು.
ಮೃತ ಮಹಿಳೆ ಪಂಜಾಳ ನಿವಾಸಿ ದೇವಿಪುರ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ದಿ| ಬಾಲಕೃಷ್ಣ ಭಟ್ (ಬಂಗಾರು ಭಟ್ರ್) ಅವರ ಪತ್ನಿ ಜಯಲಕ್ಷ್ಮೀ ಭಟ್ (73).
ಬೆಂಗಳೂರಿನಲ್ಲಿ ಪುತ್ರನ ಮನೆಯಲ್ಲಿದ್ದ ಜಯಲಕ್ಷ್ಮೀ ಅವರನ್ನು ಮಾ. 19 ರಂದು ಅಸೌಖ್ಯದ ಕಾರಣದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಾರ್ಚ್ 21 ರಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು.
ಮನೆಮಂದಿ ಮೃತದೇಹವನ್ನು ಆಂಬುಲೆನ್ಸ್ನಲ್ಲಿ ಇಡುತ್ತಿದ್ದಂತೆ ಆರೋಗ್ಯ ಅಧಿಕಾರಿಗಳು ಮೃತದೇಹವನ್ನು ಕೊಂಡೊಯ್ಯದಂತೆ ಆಸ್ಪತ್ರೆಯ ಆಡಳಿತಕ್ಕೆ ನಿರ್ದೇಶನ ನೀಡಿದ್ದರು. ಆ ಬಳಿಕ ಮೃತದೇಹದ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಸೋಮವಾರ ಬೆಳಿಗ್ಗೆ ನೆಗೆಟಿವ್ ವರದಿ ಬಂದಿದ್ದು ಆಸ್ಪತ್ರೆ ಆಡಳಿತವು ಅಂತಿಮ ಸಂಸ್ಕಾರ ಮಾಡಲು ಮೃತದೇಹವನ್ನು ಬಿಟ್ಟುಕೊಟ್ಟಿದೆ
ಮೃತದೇಹದ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದ ಕಾರಣದಿಂದಾಗಿ ಸ್ಥಳೀಯವಾಗಿ ಜಯಲಕ್ಷ್ಮೀ ಅವರಿಗೆ ಕೊರೊನಾ ಇರುವ ಬಗ್ಗೆ ಊಹಾಪೋಹಗಳು ಹರಡಿದ್ದವು.