ವಿಟ್ಲ, ಮಾ. 24 (Daijiworld News/MB) : ಕೊರೊನಾ ವೈರಸ್ ಹಬ್ಬುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕೇರಳ ಕರ್ನಾಟಕ ಗಡಿ ಭಾಗವಾದ ಕನ್ಯಾನದಲ್ಲಿ ವಿಟ್ಲ ಪೊಲೀಸರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಕರ್ತವ್ಯಕ್ಕೆ ಅಡ್ಡಿಮಾಡಿದ ಆರೋಪದಲ್ಲಿ ಇನೋರ್ವ ವ್ಯಕ್ತಿಯನ್ನು ಬಂಧನ ಮಾಡಲಾಗಿದೆ.
ಬಂಧಿತ ವ್ಯಕ್ತಿ ಮುಚ್ಚಿರಪದವು ನಿವಾಸಿ ಸಿದ್ದಿಕ್ ಯಾನೆ ಅಬೂಬಕರ್ ಸಿದ್ದಿಕ್ (28) ಎಂದು ಗುರುತಿಸಲಾಗಿದೆ.
ಅನಾವಶ್ಯಕವಾಗಿ ಸುತ್ತಾಡುತ್ತಿದ್ದ ವ್ಯಕ್ತಿಯನ್ನು ತಡೆದ ಸಂದರ್ಭದಲ್ಲಿ ಪೊಲೀಸರನ್ನು ತಳ್ಳಿ ಗಾಯಗೊಳಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ಆರೋಪಿಸಿ ಪ್ರಕರಣ ದಾಖಲು ಮಾಡಿ ಬಂಧನ ಮಾಡಲಾಗಿದೆ.
ಕೊರೊನಾ ಭೀತಿ ಹಿನ್ನಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಕನ್ಯಾನ ಪೇಟೆಯಲ್ಲಿ ಬಂದ್ ವಾತಾವರಣವಿದ್ದು ಕನ್ಯಾನದ ಅಂಗಡಿ ಮುಂದೆ ನಿಂತಿದ್ದ ಸಿದ್ಧಿಕ್, ಪೊಲೀಸರ ಮುಂದೆ ಮೂರು ಜನ ಒಂದೇ ಬೈಕ್ನಲ್ಲಿ ಹೋದರೂ ಅವರು ಮಾತನಾಡುತ್ತಿಲ್ಲ ಎಂದು ಹೇಳಿಕೊಂಡು ಅವ್ಯಾಚ್ಯವಾಗಿ ನಿಂದನೆ ಮಾಡಿದ್ದಾನೆ.
ಈ ಸಂದರ್ಭ ಪೊಲೀಸರು ಹಿಡಿಯಲು ಹೋದಾಗ ಅವರನ್ನು ಹಳ್ಳಕ್ಕೆ ತಳ್ಳಿದ್ದು ಅವರಿಗೆ ಗಾಯವಾಗಿದೆ. ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಆ ಬಳಿಕ ಪೊಲೀಸರು ಆತನನ್ನು ಬಂಧನ ಮಾಡಿದ್ದಾರೆ.