ಉಡುಪಿ, ಮಾ. 24 (Daijiworld News/MSP) : ಕರೋನಾ ವೈರಸ್ ಎಂಬುದು ಸಾಂಕ್ರಾಮಿಕ ರೋಗವಾದ್ದರಿಂದ ಅದು ಹರಡದಂತೆ ತಡೆಯಬೇಕು ಎಂದು ಸರ್ಕಾರ ಸಾಕಷ್ಟು, ಮುಂಜಾಗ್ರತಾ ಕ್ರಮ ಕೈಗೊಂಡಿದೆ, ಗುಂಪುಗೂಡದಂತೆ, ವರ್ಕ್ ಫ್ರಂ ಹೋಂ , ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕಂಪನಿ ಅಂಗಡಿ ಮುಂಗಟ್ಟುಗಳಲ್ಲಿ ಎಸಿ ಬಳಸದಂತೆ ಹೀಗೆ ಸಾಕಷ್ಟು ಸಲಹೆ ನೀಡಿದೆ. ಆದರೂ ಕೆಲವೆಡೆ ಇದ್ಯಾಅ ಸೂಚನೆಗೂ ಕ್ಯಾರೇ ಅನ್ನುತ್ತಿಲ್ಲ.
ಲಾಕ್ ಡೌನ್ ಮಾಡಿರುವ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾ ಕೇಂದ್ರ ಸಂಪೂರ್ಣ ಸ್ತಬ್ಧವಾಗಿದ್ದು, ಜನ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಬೀದಿಗಿಳಿಯುತ್ತಿದ್ದ ದೃಶ್ಯ ಮಾಮೂಲಾಗಿತ್ತು. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ತರಕಾರಿ, ದಿನಸಿ, ಮೆಡಿಕಲ್, ಹಾಲಿನಂಗಡಿ ಮುಂತಾದ ಅಗತ್ಯ ವಸ್ತುಗಳ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳ ಸೂಕ್ತ ಪಾಲನೆ ಆಗುತ್ತಿದೆಯೆ ಎಂದು ಜಿಲ್ಲಾಧಿಕಾರಿ ಮತ್ತು ಎಸ್ಪಿ ನೇತೃತ್ವದಲ್ಲಿ ದಿಢೀರ್ ಭೇಟಿ ನೀಡಿದರು.
ರಿಲಯನ್ಸ್, ಕೆನರಾ ಮಾಲ್, ಬಿಗ್ ಬಜಾರ್ ನಲ್ಲಿ ಪರಿಶೀಲನೆ ನಡೆಸಿದ ಡಿಸಿ, ಸುರಕ್ಷಾ ದೃಷ್ಟಿಯಿಂದ ನಿಯಮ ಪಾಲನೆ ಆಗುತ್ತಿದೆಯೇ ಎಂದು ಪರಿಶೀಲನೆ ನಡೆಸಿದರು.ಈ ವೇಳೆ ಮಳಿಗೆಯೊಂದರಲ್ಲಿ ಹವಾನಿಯಂತ್ರಿತ ವ್ಯವಸ್ಥೆಯಡಿ ತರಕಾರಿ ಮಾರಾಟ ಮಾಡುವುದನ್ನು ಕಂಡು ಜಿಲ್ಲಾಧಿಕಾರಿ ಕೆಂಡಾಮಂಡಲರಾದರು. ಇದೇ ವೇಳೆ ತರಕಾರಿ ದ್ವಿಗುಣ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಕಂಡು ಮಳಿಗೆಯ ಮ್ಯಾನೇಜರ್ ನನ್ನು ತರಾಟೆಗೆತ್ತಿಕೊಂಡು " ಇವ್ನನ್ನ ಒಳಗ್ಹಾಕಿ... ನಾನೇ ಕಂಪ್ಲೇಂಟ್ ಕೊಡ್ತೇನೆ" ಎಂದು ಡಿಸಿ ಗುಡುಗಿದರು.
ಇನ್ನು ತರಕಾರಿ ಶಾಪ್ ಗಳಲ್ಲಿ ಸ್ಯಾನಿಟೈಸರ್ ಬಳಕೆ ಇಲ್ಲದ್ದನ್ನು ಕಂಡು ಕೋಪಗೊಂಡ ಡಿಸಿ, ತರಕಾರಿ ವ್ಯಾಪಾರಿಗೆ ಸ್ವಚ್ಛತೆಯ ಪಾಠ ಮಾಡಿದರು.