ಮಂಗಳೂರು, ಮಾ. 24 (Daijiworld News/MSP) : ಮಂಗಳೂರಿನ ವೆನ್ ಲಾಕ್ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೋನಾ ಶಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಅವ್ಯವಸ್ಥೆ ಮತ್ತು ಕ್ವಾರಂಟೈನ್ ಕುರಿತ ಗೊಂದಲಗಳ ಬಗ್ಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಡ್ಲೂರು ಸತ್ಯನಾರಾಯಣಾಚಾರ್ಯ ಅವರು ಮಾಹಿತಿ ಪಡೆದುಕೊಂಡರು.
ದೂರವಾಣಿ ಮೂಲಕ ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ರಾಜೇಶ್ವರಿ ದೇವಿ ಅವರನ್ನು ಸಂಪರ್ಕಿಸಿದ ನ್ಯಾಯಾಧೀಶರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ, ಆಸ್ಪತ್ರೆ ಮುಖ್ಯ ಅಧೀಕ್ಷಕಿ ರಾಜೇಶ್ವರಿ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಐಸೊಲೇಷನ್ ವಾರ್ಡ್ ಮತ್ತು ಪ್ರತ್ಯೇಕ ವ್ಯವಸ್ಥೆ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ವೆನ್ಲಾಕ್ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಗೊಂದಲದ ಬಗ್ಗೆ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಧೀಶರು ಈ ಮಾಹಿತಿಯನ್ನು ಪಡೆದುಕೊಂಡರು.
ಮಾಧ್ಯಮ ವರದಿ ಹಿನ್ನೆಲೆಯಲ್ಲಿ ಅವರು, ಆಸ್ಪತ್ರೆಯ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಲು ಮಂಗಳೂರು ವಕೀಲರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜೊತೆ ವೈಯಕ್ತಿಕವಾಗಿ ವೆನ್ಲಾಕ್ ಗೆ ಭೇಟಿ ನೀಡಿ ಪರಿಶೀಲನೆ ಮಾಡುವ ತಯಾರಿ ಮಾಡಿದ್ದರು.
ಅದರೆ, ಹೈಕೋರ್ಟ್ ನ್ಯಾಯಾಧೀಶರೊಂದಿಗೆ ವಿಡಿಯೋ ಕಾನ್ಪರೆನ್ಸ್ ನಲ್ಲಿ ಭಾಗವಹಿಸಬೇಕಾದ ಕಾರಣ ಈ ಭೇಟಿಯನ್ನು ಅನಿರೀಕ್ಷಿತವಾಗಿ ರದ್ದುಗೊಳಿಸಲಾಯಿತು.