ಮಂಗಳೂರು, ಮಾ. 24 (Daijiworld News/MB) : ಮಂಗಳೂರಿನಲ್ಲಿ ಮತ್ತೆ ನಾಲ್ಕು ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ.
ಸೋಂಕಿತರೆಲ್ಲರೂ ಕೇರಳ ಮೂಲದವರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸೋಂಕಿತ ನಾಲ್ವರ ಪೈಕಿ ಮೂವರು ಮಂಗಳೂರಿನ ಮೊದಲ ಪ್ರಕರಣದ ವ್ಯಕ್ತಿಯ ವಿಮಾನದಲ್ಲಿ ಬಂದವರಾಗಿದ್ದಾರೆ.
ಮೂವರನ್ನು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಹಾಗೂ ಒಬ್ಬರನ್ನು ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಬ್ಬರು ಮಾರ್ಚ್ 20 ರಂದು ಬಂದ ಸ್ಪೈಸ್ ಜೆಟ್ ವಿಮಾನದಲ್ಲಿ ಬಂದಿದ್ದು ಓರ್ವ ವ್ಯಕ್ತಿ ಮಾರ್ಚ್ 19 ಕ್ಕೆ ಬಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಬಂದಿದ್ದಾರೆ. ಈ ಮೂವರು ಪುರುಷರಾಗಿದ್ದು ಕ್ರಮವಾಗಿ 32,47,23 ವರ್ಷ ವಯಸ್ಸಿನವರು. ಹಾಗೆಯೇ ಈ ನಾಲ್ವರು ಸೋಂಕಿತರ ಪೈಕಿ ಓರ್ವರು 70 ವರ್ಷದ ಮಹಿಳೆಯಾಗಿದ್ದು ಅವರು ಮಾರ್ಚ್ ೯ ರಂದು ಸೌದಿ ಅರೇಬಿಯಾದಿಂದ ಕ್ಯಾಲಿಕಟ್ಗೆ ಬಂದಿದ್ದು ಮಾರ್ಚ್ ೨೦ ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇದೀಗ ಸೋಂಕಿತರ ಸಂಖ್ಯೆ 43 ಕ್ಕೆ ಏರಿದೆ.