ಕಾರ್ಕಳ, ಮಾ.25 (Daijiworld News/MSP) : ಕೊರೋನಾ ವೈರಸ್ ನಿವಾರಣೆಗಾಗಿ ಸಂಜೆಯೊಳಗೆ ಭಕ್ತರೆಲ್ಲರೂ ಕಣ್ಣ(ಬ್ಲಾಕ್ ಟೀ) ಚಹಾಕ್ಕೆ ಬೆಲ್ಲ ಮತ್ತು ಅರಿಶಿಣ ಹುಡಿ ಹಾಕಿ ಕುಡಿಯಬೇಕು, ಆಗ ನಾನು ಕೊರೋನಾ ವೈರಸ್ ಯಾರಿಗೂ ಹಾನಿಯಾಗದಂತೆ ತಡೆಯುತ್ತೇನೆ ಎಂದು ಕಾಪು ಮಾರಿಯಮ್ಮನ ಅಪ್ಪಣೆಯಾಗಿದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕರಾವಳಿಯಾದ್ಯಂತ ಮಂಗಳವಾರ ಸಂಜೆ ವೇಳೆ ಈ ಸುದ್ದಿ ವೈರಲ್ ಆಗಿ ಕೊನೆಗೆ ದೇವಸ್ಥಾನದ ಆಡಳಿತ ಮಂಡಳಿಯೂ ವೈರಲ್ ಸುದ್ದಿಗೆ ಇದೆಲ್ಲಾವೂ ಸುಳ್ಳು ಈ ರೀತಿ ಯಾವುದೇ ದರ್ಶನವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಮಂಗಳವಾರ ಕಾಪುವಿನ ಪ್ರಸಿದ್ಧ 3 ಮಾರಿಗುಡಿಗಳಲ್ಲಿ ಸುಗ್ಗಿ ಮಾರಿಪೂಜೆ ನಡೆಯಿತು. ಈ ಸಂದರ್ಭದಲ್ಲಿ ದೇವಿಯ ದರ್ಶನ ಸೇವೆ ನಡೆದು ತಾಯಿ ಹಾಲು ಹಾಕದೆ ಚಹಾ ತಯಾರಿಸಿ ಬೆಲ್ಲ ಮತ್ತು ಅರಿಶಿಣ ಹುಡಿ ಹಾಕಿ ಕುಡಿಯಬೇಕು ಎಂದು ಅಪ್ಪಣೆ ಕೊಡಿಸಿದಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.
ಆದರೆ ಮಂಗಳವಾರ ಮಧ್ಯಾಹ್ನ ಯಾವುದೇ ದರ್ಶನ ಸೇವೆಯೇ ಇರಲಿಲ್ಲ, ಕೊರೋನಾ ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ಜಿಲ್ಲಾಡತವೇ ಮಾರಿ ಜಾತ್ರೆಯನ್ನು ರದ್ದುಗೊಳಿಸಿತ್ತು. ಈ ವದಂತಿಯನ್ನು ಭಕ್ತರು ನಂಬಬಾರದು ಎಂದು ಮೂರು ಮಾರಿಗುಡಿಗಳ ಆಡಳಿತ ಮಂಡಳಿ ಸ್ಪಷ್ಟಪಡಿಸಿತ್ತು.
ಕೊನೆಗೂ ಸುಳ್ಳು ಸುದ್ದಿಯನ್ನು ವಾಟ್ಸಪ್ ಮೂಲಕ ವೈರಲ್ ಮಾಡಿದ ಸ್ಥಳಿಯ ಯುವಕ ದೇವಾಸ್ಥಾನದ ಆಡಳಿತ ಮಂಡಳಿಯ ಕೈಗೆ ಸಿಕ್ಕಿಬಿದ್ದಿದ್ದು, ತನ್ನ ತಪ್ಪಿನ ಅರಿವಾಗಿ ಮಾರಿಗುಡಿಯಲ್ಲಿ ತಾನು ಮುಂದೆ ಈ ರೀತಿ ಸುಳ್ಳು ಸುದ್ದಿ ಹರಡುವುದಿಲ್ಲ ಎಂದು ಕ್ಷಮೆಯಾಚಿಸಿದ್ದಾನೆ. ಪೊಲೀಸರ ಹಾಗೂ ಆಡಳಿತ ಮಂಡಳಿಯು ಯುವಕನಿಗೆ ಬುದ್ದಿವಾದ ಹೇಳಿದ್ದು ಕಳುಹಿಸಿದ್ದಾರೆ.