ಮಂಗಳೂರು, ಮಾ.25 (Daijiworld News/MSP) : ಪ್ರಸ್ತುತ ಇರುವ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗಳು ನಮ್ಮ ಜಿಲ್ಲೆಯ ಜನರಿಗೆ ಸಾಲುವುದಿಲ್ಲ, ಹೀಗಾಗಿ ಹೊರಗಿನ ಅಂಬ್ಯುಲೆನ್ಸ್ ಸೇರಿ ಯಾವುದೇ ವಾಹನವನ್ನು ಜಿಲ್ಲೆಯ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಸಂಸದ ನಳಿನ್ ಕುಮಾರ್ ಹೇಳಿದ್ದಾರೆ.
ಕೇರಳದಿಂದ ನಿರಂತರವಾಗಿ ಅಂಬುಲೆನ್ಸ್ ಗಳು ಮಂಗಳೂರು ಆಸ್ಪತ್ರೆಗೆ ಸಂಚರಿಸುತ್ತಿದ್ದು, ಇದು ಜಿಲ್ಲೆಯ ಜನರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಸಣ್ಣ ಜ್ವರ ಬಂದರೂ ಆಂಬ್ಯುಲೆನ್ಸ್ ಮೂಲಕ ಕೇರಳಿಗರು ಮಂಗಳೂರಿನ ಆಸ್ಪತ್ರೆ ಸೇರುತ್ತಿರುವ ದೃಶ್ಯ ಕಳೆದೆರಡು ದಿನಗಳಿಂದ ಮಾಮೂಲಾಗಿತ್ತು. ಮಂಗಳೂರಿನಲ್ಲಿರು ಆಸ್ಪತ್ರೆಗಳು ಸ್ಥಳೀಯ ರಾಜ್ಯವಾದ ಕೇರಳಿಗರೇ ತುಂಬಿ ತುಳುಕಿದರೆ ತುರ್ತು ಸ್ಥಿತಿಯಲ್ಲಿ ಜಿಲ್ಲೆಯ ಜನರು ದಾಖಲಾಗುವುದಾದರೂ ಎಲ್ಲಿ ಎಂದು ಜಿಲ್ಲೆಯ ಜನಸಾಮಾನ್ಯರು ಪ್ರಶ್ನಿಸಿದ್ದರು.
ಇದಕ್ಕೆ ಸ್ಪಷ್ಟನೆ ನೀಡಿರುವ ಸಂಸದರು, ಮಂಗಳವಾರ ಅತೀ ಹೆಚ್ಚು ರೋಗಿಗಳು ಕೇರಳದಿಂದ ಮಂಗಳೂರಿಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಒಂದು ನಿರ್ಧಾರ ತೆಗೆದುಕೊಂಡಿದೆ. ಸದ್ಯದ ಉದ್ಬವವಾಗಿರುವ ಪರಿಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗಳು ನಮಗೆ ಸಾಲುವುದಿಲ್ಲ. ಹೀಗಾಗಿ ಹೊರಗಿನ ವಾಹನ, ಅಂಬ್ಯುಲೆನ್ಸ್ ಸೇರಿ ಯಾವುದನ್ನೂ ಬಿಡಬಾರದು ಅಂತ ನಿರ್ಧರಿಸಲಾಗಿದೆ. ಇನ್ನು ಎಲ್ಲಾ ಅಂಬ್ಯುಲೆನ್ಸ್ ಗಳನ್ನ ತಲಪಾಡಿ ಗಡಿಯಲ್ಲಿ ನಿರ್ಬಧಿಸಲಾಗುತ್ತಿದೆ. ಎಲ್ಲಾ ವಾಹನಗಳನ್ನು ಗಡಿಯಲ್ಲಿ ಬಂದ್ ಮಾಡಲಾಗಿದೆ ಎಂದು ಜಿಲ್ಲೆಯ ಜನತೆಗೆ ದೈರ್ಯ ತುಂಬಿದ್ದಾರೆ.