ಬಂಟ್ವಾಳ, ಮಾ.25 (Daijiworld News/MSP) : ಜಾಗತಿಕ ಕೋವಿಡ್ ವೈರಸ್ ಮಹಾ ಮಾರಿ ಖಾಯಿಲೆಯನ್ನು ಜನತೆ ಗಂಭೀರವಾಗಿ ಸ್ವಯಂಪ್ರೇರಿತರಾಗಿ ಎಚ್ಚರಿಕೆ ವಹಿಸಬೇಕು. ಇದರೊಂದಿಗೆ ಸರ್ಕಾರ ಬಡತನ ರೇಖೆಗಳಿಂದ ಕೆಳಗಿರುವ ಜನರಿಗೆ ಅಕ್ಕಿಯ ಜತೆಗೆ ದಿನಸಿ ಸಾಮಾಗ್ರಿಗಳನ್ನೂ ಉಚಿತವಾಗಿ ವಿವರಿಸುವುದಕ್ಕೆ ಕ್ರಮವಹಿಸಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಒತ್ತಾಯಿಸಿದ್ದಾರೆ.
ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಮಾಡಲಾಗಿದೆ. ಕರ್ನಾಟಕದಲ್ಲಿ ಲಾಕ್ ಡೌನ್ ಜಾರಿ ಮಾಡುವಾಗ ಕೆಲವು ವಿನಾಯಿತಿಗಳನ್ನು ಘೋಷಣೆ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ಈಗಾಗಲೇ ಧರ್ಮಾರ್ಥ ಅಕ್ಕಿ ಒದಗುತ್ತಿರುವ ಜೊತೆಗೆ ದಿನಸಿ ಸಾಮಾಗ್ರಿಗಳಾದ ಉಪ್ಪು, ಹುಳಿ, ಮೆಣಸು, ಎಣ್ಣೆ, ತೆಂಗಿನಕಾಯಿಯನ್ನೂ ಆದ್ಯತೆಯ ಮೇರೆಗೆ ಉಚಿತವಾಗಿ ನೀಡಲು ತುರ್ತು ಕ್ರಮ ಕೈಗೊಳ್ಳಬೇಕು.
ಸಾರ್ವಜನಿಕರು ಸರಕಾರದ ಆದೇಶವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಕೊರೋನಾ ವೈರಸ್ ಜನರಿಂದ ಜನರಿಗೆ ಹರಡದಂತೆ ಎಚ್ಚರಿಕೆ ವಹಿಸಲು ಅವರು ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.