ಮಂಗಳೂರು, ಫೆ 24: ನಗರದ ಸಂಚಾರಿ ಪೊಲೀಸ್ ಪೇದೆಯೊಬ್ಬರು ಸಮಾಜಕ್ಕೆ ಮಾದರಿಯಾಗುವಂತ ರೀತಿ ಕರ್ತವ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ನಗದು ಬಹುಮಾನ ನೀಡಿ ಸನ್ಮಾನಿಸಲಾಗಿದೆ.
ಬಂಟ್ಸ್ ಹಾಸ್ಟೆಲ್ ಬಳಿಯ ಕಾಂಕ್ರೀಟ್ ರಸ್ತೆಗೆ ಲೋಹದ ತಂತಿ ಜೋಡಿಸಿ ವಾಹನ ಸವಾರರಿಗೆ ಅನುಕೂಲವಾಗುವ ರೀತಿ ಕೆಲಸ ಮಾಡಿದ್ದಾರೆ. ಈ ಹಿಂದೆ ಈ ರಸ್ತೆಯಲ್ಲಿದ್ದ ಲೋಹದ ತಂತಿ ಎದ್ದಿದ್ದ ಕಾರಣ ಬೈಕ್ ಸವಾರನೊಬ್ಬ ಅಪಘಾತಗೊಳಗಾಗಿದ್ದ. ಹೀಗಾಗಿ ಅದನ್ನು ನೋಡಿದ ರೇವಣ ಸಿದ್ದಪ್ಪ ಮರುದಿನ ಬೆಳಗ್ಗೆ ರಸ್ತೆಯ ಮೇಲಿದ್ದ ಲೋಹದ ತಂತಿಯನ್ನು ಜೋಡಿಸಿ, ಎಲ್ಲರಿಂದಲೂ ಮೆಚ್ಚುಗೆ ಪಡೆದಿದ್ದಾರೆ.
ಪಕ್ಕದ ಅಂಗಡಿಯ ವ್ಯಕ್ತಿಯೊಬ್ಬರು ರೇವಣ ಸಿದ್ದಪ್ಪ ರಸ್ತೆಯಲ್ಲಿ ಲೋಹದ ತಂತಿ ರಿಪೇರಿ ಮಾಡುವುದನ್ನು ವಿಡಿಯೋ ಮಾಡಿದ್ದರು. ಈ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಪರ್ಯಾಸವೆಂದ್ರೆ ಕಳೆದ ಹಲವು ತಿಂಗಳಿಂದ ಲೋಹದ ತಂತಿ ಮೇಲೆದಿದ್ದರೂ ಕಾರ್ಪೋರೇಷನ್ ಕಣ್ಣು ಮುಚ್ಚಿ ಕುಳಿತಿತ್ತು. ಈ ಬಗ್ಗೆ ತಿಳಿದಿದ್ದರೂ ಮೌನಕ್ಕೆ ಶರಣಾಗಿದ್ದರು.
ಇದೀಗ ಮಂಗಳೂರು ಪೊಲೀಸ್ ಆಯುಕ್ತ ಟಿ ಸುರೇಶ್ ರೇವಣ್ಣ ಸಿದ್ದಪ್ಪ ಅವರಿಗೆ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.