ಮಂಗಳೂರು, ಮಾ.26 (Daijiworld News/MSP) : ದಿನದಿನಕ್ಕೆ ಕೊರೊನಾ ಪೀಡಿತರ ಸಂಖ್ಯೆ ದೇಶಾದ್ಯಂತ ಹೆಚ್ಚಾಗುತ್ತಿದ್ದು, ಕೊಂಚ ಆಶಾದಾಯಕ ಸಂಗತಿ ಎಂದರೆ ಮಾ. 25ರ ಬುಧವಾರ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕೊರೊನಾ ದೃಢವಾದ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.
ಈಗಾಗಲೇ ಮಂಗಳೂರಿನಲ್ಲಿ ಐದು ಪ್ರಕರಣಗಳು ವರದಿಯಾಗಿದ್ದು, ಕಾಸರಗೋಡು ಜಿಲ್ಲೆಯೊಂದರಲ್ಲಿ ಪೀಡಿತರ ಸಂಖ್ಯೆ ಮಂಗಳವಾರ 44 ಕ್ಕೆ ತಲುಪಿದೆ. ಸಮಾಧಾನಕರ ಸಂಗತಿ ಎಂದರೆ ಬುಧವಾರ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ. ಈ ಹಿನ್ನಲೆಯಲ್ಲಿ ಜನರು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಬುಧವಾರವೊಂದೇ ಕರ್ನಾಟಕದಲ್ಲಿ 10 ಮತ್ತು ಕೇರಳದಲ್ಲಿ ಒಂಬತ್ತುಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಇವುಗಳಲ್ಲಿ ಕಾಸರಗೋಡು ಮತ್ತು ದ.ಕ ಜಿಲ್ಲೆಯ ಪ್ರಕರಣಗಳಿಲ್ಲ.
ಕೊರೊನಾ ವೈರಸ್ ವಿರುದ್ದ ನಿರ್ಣಾಯಕವಾಗಿ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವ್ಯಾಪಿ ಮೂರು ವಾರಗಳ ಲಾಕ್ ಡೌನ್ ಘೋಷಿಸಿದ್ದಾರೆ.ಮಾರಣಾಂತಿಕ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಕೈಗೊಂಡಿದೆ. ವಿದೇಶದಿಂದ ಬಂದ ಪ್ರಯಾಣಿಕರನ್ನು 14 ದಿನಗಳ ಕಾಲ ಮನೆ ಕ್ಯಾರೆಂಟೈನ್ ಮಾಡಲು ತಿಳಿಸಲಾಗಿದೆ. ಕ್ಯಾರೆಂಟೈನ್ ನಲ್ಲಿರುವ ಮನೆ ಸಂಪರ್ಕ ತಡೆಹಿಡಿಯುವಂತೆ ಸೂಚಿಸಲಾಗಿದ್ದು, ವಿದೇಶದಿಂದ ಬಂದ ಪ್ರಯಾಣಿಕರು ಕುಟುಂಬ ಸದಸ್ಯರೊಂದಿಗೆ ವಿಶೇಷವಾಗಿ ಮಕ್ಕಳು ಮತ್ತು ವೃದ್ಧರೊಂದಿಗೆ ಬೆರೆಯಬಾರದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬಾರದು ಎಂದು ಕೋರಲಾಗಿದೆ.
ಮನೆ ನಿರ್ಬಂಧಿತ ಪ್ರಯಾಣಿಕರ ಕುಟುಂಬ ಸದಸ್ಯರಲ್ಲಿ ಯಾರಾದರೂ ಕೊರೊನವೈರಸ್ ರೋಗಲಕ್ಷಣಗಳನ್ನು ಕಂಡುಬಂದರೆ, ಅವರು ಆರೋಗ್ಯ ಅಧಿಕಾರಿಗಳು ಅಥವಾ ತಹಶೀಲ್ದಾರ್ ಸಂಪರ್ಕಿಸಲು ಅಥವಾ ಟೋಲ್ ಫ್ರೀ ಸಂಖ್ಯೆ 1077 ಅನ್ನು ಸಂಪರ್ಕಿಸಲು ಕೋರಲಾಗಿದೆ.