ಮಂಗಳೂರು, ಮಾ 27 (Daijiworld News/MSP): ಕೊರೊನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ದ.ಕ ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು ಗುರುವಾರದ ಮಟ್ಟಿಗೆ ದ.ಕ ಕೊಂಚ ನಿರಾಳವಾಗಿದೆ. ಜಿಲ್ಲೆಯಲ್ಲಿ ಗುರುವಾರ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ ಎನ್ನುವುದು ಆಶಾದಾಯಕ ವಿಚಾರ.
ಜಿಲ್ಲೆಯಲ್ಲಿ ಮಾತ್ರವಲ್ಲದೆ ಉಡುಪಿಯಲ್ಲೂ ಗುರುವಾರ ಯಾವುದೇ ಕೊರೊನಾ ಪ್ರಕರಣಗಳು ದೃಢಪಟ್ಟಿಲ್ಲ. ನಿನ್ನೆ ಒಟ್ಟು 9 ಮಾದರಿಗಳ ಪರೀಕ್ಷಾ ವರದಿ ಜಿಲ್ಲಾಡಳಿತದ ಕೈಸೇರಿದ್ದು, ಯಾವುದೇ ಕೋವಿಡ್–19 ಪ್ರಕರಣ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಸ್ಪಷ್ಟಪಡಿಸಿದ್ದಾರೆ.
ಆದರೆ ನೆರೆಯ ಜಿಲ್ಲೆಯಾದ ಕಾಸರಗೋಡಿನಲ್ಲಿ ೩ ಹೊಸ ಪ್ರಕರಣ ಪತ್ತೆಯಾಗಿದೆ. ಇನ್ನು ದ.ಕ ಜಿಲ್ಲೆಯಾದ್ಯಂತ ಒಟ್ಟು 2,902 ಜನರು ಮನೆಯಲ್ಲಿಯೇ ವೈದ್ಯಕೀಯ ನಿಗಾದಲ್ಲಿ ಇದ್ದು, ಈ ಪೈಕಿ 20 ಮಂದಿ 14 ದಿನಗಳ ಹೋಮ್ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. ಗುರುವಾರ ಕೇವಲ 3 ಕೊರೊನಾ ಶಂಕಿತ ಪ್ರಕರಣಗಳು ಕಂಡು ಬಂದಿದ್ದು, ಅವರಿಗೆ ಅಗತ್ಯ ಚಿಕಿತ್ಸೆ ನೀಡುವುದನ್ನು ಮುಂದುವರಿಸಲಾಗಿದೆ. ಗುರುವಾರ ಒಟ್ಟು 46 ಜನರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ನಾಲ್ಕು ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.