ಮಂಗಳೂರು,ಮಾ 27 (Daijiworld News/MSP): ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಹೀಗಿದ್ದರೂ ಜನತೆ ಮಾತ್ರ ಲಾಕ್ ಡೌನ್ ಆದೇಶ ಉಲ್ಲಂಘಿಸಿ ರಸ್ತೆಗಿಳಿಯುತ್ತಿದ್ದಾರೆ. ಇದಕ್ಕೆ ಪೊಲೀಸರು ಲಾಠಿ ಚಾರ್ಜ್ ಅಸ್ತ್ರ, ಬಸ್ಕಿ, ಕಸ ಗುಡಿಸುವ ಶಿಕ್ಷೆ ಹೀಗೆ ವಿಧ ವಿಧ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಕೊರೊನಾ ವಿಪರೀತವಾಗಿ ಹಬ್ಬುತ್ತಿದ್ದು ಇದರ ತಡೆಗೆ ಘೋಷಿಸಿರುವ ಲಾಕ್ ಡೌನ್ ಮಹತ್ವದ ಕುರಿತು ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ.
ನಿಗದಿತ ಅವಧಿಯಲ್ಲಿ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ಅವಕಾಶ ನೀಡಿದ್ದರೂ, ಮಧ್ಯಾಹ್ನದ ಬಳಿಕವೂ ಜನ ಬೀದಿಬೀದಿಯಲ್ಲಿ ವಾಹನಗಳ ಸಮೇತ ತಿರುಗುತ್ತಿರುವುದು ಸಾಮಾನ್ಯ. ಏತನ್ಮಧ್ಯೆ ಮಂಗಳೂರಿನಲ್ಲಿ ರಾಮಕೃಷ್ಣ ಮಿಷನ್ ವಿನೂತನವಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಸುಖಾಸುಮ್ಮನೆ ರಸ್ತೆಗಳಿದ ಸಾರ್ವಜನಿಕರಿಗೆ, "ನನ್ನನ್ನು ಕ್ಷಮಿಸಿ ನಾನು ಕೊರೊನಾ ಲಾಕ್ ಡೌನ್ ಆದೇಶ ಉಲ್ಲಂಘಿಸಿದ್ದೇನೆ" ಎನ್ನುವ ಬಿತ್ತಿಪತ್ರ ನೀಡಿ ಲಾಕ್ ಡೌನ್ ಹಾಗೂ ವೈರಸ್ ಬಗ್ಗೆ ಹೆಚ್ಚು ಹೆಚ್ಚು ಅರಿವು ಮೂಡಿಸಲು ರಾಮಕೃಷ್ಣ ಸೇವಾ ಮಿಷನ್ ನ ಸ್ವಯಂ ಸೇವಕರು ಪ್ರಯತ್ನಿಸಿದ್ದಾರೆ.
ಹೊರಗಡೆ ಅನಗತ್ಯ ತಿರುಗಾಡಬೇಡಿ ಮತ್ತೆ ಇಂತಹ ತಪ್ಪುಗಳನ್ನು ಮರುಕಳಿಸದಂತೆ ನೋಡಿಕೊಳ್ಳಿ ಎಂದು ನಗರದೆಲ್ಲೆಡೆ ಜಾಗೃತಿ ಮೂಡಿಸುತ್ತಿದ್ದಾರೆ.