ಕಾಸರಗೋಡು, ಮಾ.27 (Daijiworld News/MB) : ಓರ್ವ ಮಹಿಳೆಗೆ ಆಂಬ್ಯುಲೆನ್ಸ್ನಲ್ಲೆ ಹೆರಿಗೆಯಾದ ಘಟನೆ ಕಾಸರಗೋಡಿನಲ್ಲಿ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ.
ಮಹಿಳೆಯನ್ನು ಮಂಗಳೂರಿಗೆ ಕೊಂಡೊಯ್ಯಲು ಗಡಿಯಲ್ಲಿ ಪೊಲೀಸರು ಆಂಬ್ಯುಲೆನ್ಸ್ನ್ನು ತಡೆದ ಹಿನ್ನಲೆಯಲ್ಲಿ ಕಾಸರಗೋಡಿಗೆ ಕೊಂಡೊಯ್ಯುವ ದಾರಿ ಮಧ್ಯೆ ಮಗುವಿಗೆ ಜನ್ಮ ನೀಡಿದ್ದಾಳೆ .
ಮಂಜೇಶ್ವರ ಕುಂಜತ್ತೂರಿನಲ್ಲಿ ನೆಲೆಸಿರುವ ಉತ್ತರ ಭಾರತ ಮೂಲದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು , ಕೂಡಲೇ ಸ್ಥಳೀಯ ಅಂಬ್ಯುಲೆನ್ಸ್ನಲ್ಲಿ ಮಂಗಳೂರಿಗೆ ಕೊಂಡೊಯ್ಯಲು ತಲಪಾಡಿ ತಲುಪಿದಾಗ ಕರ್ನಾಟಕ ಪೊಲೀಸರು ತಡೆದರು. ಮರಳುವಂತೆ ಪೊಲೀಸರು ಮನವಿ ಮಾಡಿದ್ದು , ಇದರಿಂದ ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ಯುವ ಮಧ್ಯೆ ಮೊಗ್ರಾಲ್ ಎಂಬಲ್ಲಿ ತಲುಪಿದಾಗ ಅಂಬ್ಯುಲೆನ್ಸ್ನಲ್ಲೇ ಹೆರಿಗೆ ನಡೆದಿದೆ .
ಮಹಿಳೆ ಮಂಗಳೂರು ಆಸ್ಪತ್ರೆಯಲ್ಲೇ ಈ ಹಿಂದೆ ತಪಾಸಣೆ ನಡೆಸಿದ್ದು, ಇದರಿಂದ ಹೆರಿಗೆಗೆಂದು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲು ತೀರ್ಮಾನಿಸಲಾಗಿತ್ತು.
ಕುಂಜತ್ತೂರಿನಿಂದ ಮಂಗಳೂರಿಗೆ ಕೇವಲ 14 ಕಿ . ಮೀ ನಷ್ಟು ಮಾತ್ರ ದೂರ ಇದ್ದು , ಆದರೆ ಕಾಸರಗೋಡಿಗೆ ತಲುಪಲು 35 ಕಿ . ಮೀ ನಷ್ಟು ದೂರ ಇದೆ. ಮಂಜೇಶ್ವರ ಪರಿಸರದ ಬಹುತೇಕ ಮಂದಿ ಮಂಗಳೂರಿನ ಆಸ್ಪತ್ರೆಯನ್ನು ಅವಲಂಬಿಸಿಕೊಂಡಿದ್ದು , ಇದೀಗ ಲಾಕ್ಡೌನ್ ಹಿನ್ನಲೆಯಲ್ಲಿ ಚಿಕಿತ್ಸೆ ಲಭಿಸದೆ ಗಡಿ ಪ್ರದೇಶದ ನೂರಾರು ರೋಗಿಗಳು , ಗರ್ಭಿಣಿಯರು ಅತಂತ್ರಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.
ಕಾಸರಗೋಡಿನ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗು ಆರೋಗ್ಯವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.