ಕಾಸರಗೋಡು, ಮಾ 27 (Daijiworld News/MSP): ಕೇರಳ- ಕರ್ನಾಟಕ ಗಡಿಯ ದೇಲಂಪಾಡಿಯಲ್ಲಿ ಗುಂಪೊಂದು ಪೊಲೀಸರನ್ನು ತಡೆದು ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಎಸ್. ಐ ಸೇರಿದಂತೆ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ, ದೇಲಂಪಾಡಿ ಕಲ್ಲಡ್ಕ ಎಂಬಲ್ಲಿ ಘಟನೆ ನಡೆದಿದೆ.
ಲಾಕ್ ಡೌನ್ ಹಿನ್ನಲೆಯಲ್ಲಿ ಗಡಿಯ ಕಲ್ಲಡ್ಕ ದಲ್ಲಿ ಕರ್ನಾಟಕ ಪೊಲೀಸರು ರಸ್ತೆಗೆ ಮಣ್ಣು ಹಾಕಿ ಸಂಚಾರ ಬಂದ್ ಮಾಡಿದ್ದರು. ಇದರ ಸಮೀಪ ಕಾಲನಿಗೆ ತೆರಳುವ ರಸ್ತೆಯೂ ಬಂದ್ ಮಾಡಲಾಗಿತ್ತು. ಆರೋಗ್ಯ ಕಾರ್ಯಕರ್ತರು ಕಾಲನಿಗೆ ತೆರಳದಂತೆ ರಸ್ತೆ ತಡೆ ನಡೆಸಿದ್ದರು.
ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಯವರಿಗೆ ದೂರು ಲಭಿಸಿತ್ತು . ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಪೊಲೀಸರು ಕಾಲನಿಗೆ ತೆರಳಿದ ಸಂದರ್ಭದಲ್ಲಿ ಗುಂಪೊಂದು ಮರದ ತುಂಡು, ಕಲ್ಲುಗಳನ್ನು ಬಳಸಿ ಪೊಲೀಸರನ್ನು ತಡೆದಿದ್ದು, ಹಲ್ಲೆ ನಡೆಸಿದರು.
ಹಲ್ಲೆಯಿಂದ ಸಬ್ ಇನ್ಸ್ ಪೆಕ್ಟರ್ ಮುಕುಂದನ್, ಗೋಕುಲ್, ಸುಭಾಷ್, ಚಂದ್ರನ್ ಗಾಯಗೊಂಡಿದ್ದು, ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.