ಮಂಗಳೂರು, ಮಾ 27 (Daijiworld News/MSP): ದೇಶಾದ್ಯಂತ ಜಾರಿಗೊಂಡಿರುವ ಲಾಕ್ ಡೌನ್ ಸಂಧರ್ಭದಲ್ಲಿ ತುರ್ತು ಆಹಾರ ವಸ್ತುಗಳ ಪೂರೈಕೆಯ ವಿಚಾರವಾಗಿ ಮಂಗಳೂರು ನಗರ ದಕ್ಷಿಣ ಶಾಸಕರಾದ ಡಿ.ವೇದವ್ಯಾಸ್ ಕಾಮತ್ ಅವರು ಆಹಾರ ಪೂರೈಕೆ ಸಂಸ್ಥೆಗಳಾದ ಝೋಮೆಟೋ, ಊಬರ್ ಈಟ್ಸ್, ಮತ್ತಿತರ ಸಂಸ್ಥೆಗಳೊಂದಿಗೆ ಸಭೆ ನಡೆಸಿದರು.
ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಕೊರೆನೋ ಭೀತಿಯು ಮುಂದಿನ ಕಠಿಣ ದಿನಗಳಿಗೆ ಸಾಕ್ಷಿಯಾಗಿದೆ. ಸದ್ಯ ದೇಶದಲ್ಲಿ ಆಹಾರ ಸಾಮಾಗ್ರಿಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸಗಳು ಆಗಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಸಂಪೂರ್ಣ ಲಾಕ್ ಡೌನ್ ಆಗುವ ಸಂಧರ್ಭದಲ್ಲಿ ಮನೆ ಮನೆಗೆ ಆಹಾರ ಸಾಮಾಗ್ರಿಗಳ ಪೂರೈಸುವ ನಿಟ್ಟಿನಲ್ಲಿ ಈ ಸಭೆ ನಡೆದಿದೆ ಎಂದು ಶಾಸಕರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕರು, ದೇಶದಲ್ಲಿ ಜನರು ಕೊರೆನೋ ವೈರಸ್ ಕುರಿತು ಜಾಗೃತಿ ವಹಿಸಬೇಕಾದ ಅನಿವಾರ್ಯತೆಯಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರವಿಲ್ಲದೆ ಸಾಧ್ಯವೇ ಇಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರೂ ಕೂಡ ಸಾರಿ ಹೇಳಿದ್ದಾರೆ. ಆದರೆ ಸಾರ್ವಜನಿಕರು ಈ ವಿಚಾರವನ್ನು ಲಘುವಾಗಿ ತೆಗೆದುಕೊಂಡರೆ ಅದು ಯಾವ ಹಂತಕ್ಕೂ ತಲುಪಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸದ್ಯ ಆಹಾರ ಸಾಮಾಗ್ರಿಗಳ ಪೂರೈಕೆ ಲಭ್ಯವಿದ್ದು ಮುಂದಿನ ದಿನಗಳಲ್ಲಿ ಸಂಪೂರ್ಣ ಕರ್ಫ್ಯೂ ಜಾರಿಯಾದರೆ ಆಹಾರ ಪೂರೈಕೆದಾರ ಸಂಸ್ಥೆಗಳ ಮೂಲಕ ಮನೆ ಮನೆಗೆ ಆಹಾರ ಸಾಮಾಗ್ರಿಗಳನ್ನು ತಲುಪಿಸುವ ಯೋಜನೆಯಿದೆ. ಸಹಾಯವಾಣಿ ಕೇಂದ್ರದ ಮೂಲಕ ಜನರೊಂದಿಗೆ ನಿರಂತರ ಸಂಪರ್ಕ ಕಲ್ಪಿಸಿ ತುರ್ತಾಗಿ ಬೇಕಾದ ಸಾಮಾಗ್ರಿಗಳನ್ನು ತಲುಪಿಸುವ ಯೋಜನೆಯಾಗಿದೆ. ಮನೆ ಮನೆಗೆ ಸಿದ್ಧ ಆಹಾರ, ಆಹಾರ ಸಾಮಾಗ್ರಿ, ತರಕಾರಿ, ಔಷದೀಯ ಸಾಮಾಗ್ರಿಗಳನ್ನು ತಲುಪಿಸಲು ಹಲವಾರು ಸಂಸ್ಥೆಗಳು ಮುಂದೆ ಬಂದಿವೆ. ಆದರೆ ಕಾಲಾನುಕ್ರಮದಲ್ಲಿ ಇವೆಲ್ಲವನ್ನೂ ಜೋಡಿಸಿ ಜನರಿಗೆ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ಈ ಸಂಧರ್ಭದಲ್ಲಿ ಆಹಾರ ಪೂರೈಕೆ ಸಂಸ್ಥೆಯ ಸಿಬ್ಬಂದಿಗಳು ತಮ್ಮ ಆರೋಗ್ಯದ ದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ, ಈ ಯೋಜನೆ ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎನ್ನುವ ವಿಚಾರದ ಬಗ್ಗೆ ಚರ್ಚೆಗಳಾಗಿದ್ದು ಪರಿಸ್ಥಿತಿಗೆ ಅನುಗುಣವಾಗಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ಶಾಸಕರು ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಅಭಿನವ್ ಕಿಣಿ, ವೈಶಾಖ್ ಪೈ,ಸ್ಮಾರ್ಟ್ ಸಿಟಿಯ ಧರ್ಮ ರಾಜ್, ಫ್ರಿನ್ಸ್ ಪಿಂಟೋ, ಸ್ವಿಗ್ಗಿ ಸಂಸ್ಥೆಯ ಲಕ್ಷ್ಮಿ ನಾರಾಯಣ ಶೆಣೈ, ಕಲಂದರ್ ಶೇಕ್, ಚಿಟ್ಕಿ ಪ್ರೈವೇಟ್ ಲಿಮಿಟೆಡ್ ಇದರ ಪ್ರಮುಖರಾದ ದೀಕ್ಷಿತ್ ಶೆಟ್ಟಿ, ಐಡಿಯಲ್ ಚಿಕನ್ ಸಂಸ್ಥೆಯ ಪ್ರಮುಖರು,ಶಾಡೋ ಫಾಕ್ಸ್ ಸಂಸ್ಥೆಯ ಸನತ್, ಹೆಲ್ತ್ ಇ ಸಂಸ್ಥೆಯ ಧೀರಜ್ ಭಂಡಾರಿ, ಝೂಪ್ ಡೆಲಿವರಿ ಸಂಸ್ಥೆಯ ಸುಮಿತ್, ರೋಡ್ ರನ್ನರ್ ಫುಡ್ ಡೆಲಿವರಿ ಸಂಸ್ಥೆಯ ಪ್ರಮುಖರು, ಮಾಂಸ ಪೂರೈಕೆದಾರ ಕಿಂಗ್ಸ್ ಮಟನ್ ಸಂಸ್ಥೆಯ ಪ್ರತಿನಿಧಿ, ಡೋಮಿನೋಸ್ ಫಿಜ್ಜಾ ಸಂಸ್ಥೆಯ ಪ್ರತಿನಿಧಿಗಳು, ಝೋಮೇಟೋ ಸಂಸ್ಥೆಯ ವೈಭವ್,ನೀಲಗಿರೀಸ್ ಸಂಸ್ಥೆಯ ಅಷರ್ ಎ.ಆರ್, ಡೆಲಿವರಿ ಪ್ರೈವೇಟ್ ಲಿಮಿಟೆಡ್ ಇದರ ಅಶೋಕ್ .ಎ, ಸ್ಮಾಲ್ ಬಜಾರ್ ಸಂಸ್ಥೆಯ ರಾಘವೇಂದ್ರ ಕುಂಬ್ಳೆ, ಹಾಗೂ ಆಹಾರ ಪೂರೈಕೆದಾರ ವಿನೋದ್ ಕಾಮತ್, ಶ್ವಾನ ಪ್ರೇಮಿ ತೌಸಿಫ್ ಅಹಮ್ಮದ್ ಉಪಸ್ಥಿತರಿದ್ದರು.