ಬಂಟ್ವಾಳ, ಮಾ.27 (DaijiworldNews/PY) : ತಾಲೂಕಿನ ಸಜಿಪನಡು ಗ್ರಾಮದ 10 ತಿಂಗಳ ಮಗುವಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆ ಇದೀಗ ಇಡೀ ಗ್ರಾಮವೇ ಪೊಲೀಸರ ಕಣ್ಗಾವಲಿನಲ್ಲಿದ್ದು, ಹೆಚ್ಚುವರಿ ಪೊಲೀಸರನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ. ಅಲ್ಲದೇ, ಯಾರೂ ಮನೆಯಿಂದ ಹೊರಬಾರದಂತೆ ಸೂಚನೆ ನೀಡಲಾಗಿದೆ.
ಅಧಿಕಾರಿಗಳು ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಹಿಸಲು ಸಜಿಪನಡು ಗ್ರಾಮ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತರು, ಪಂಚಾಯತ್ ಅಭಿವೃದ್ದಿ ಅಧಿಕಾರಿ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಕಾರಿಗಳನ್ನು ಒಳಗೊಂಡ ಗ್ರಾಮ ಮಟ್ಟದ ಕಾರ್ಯಪಡೆಯನ್ನು ರಚಿಸಿ ಕಾರ್ಯಪ್ರವೃತ್ತರಾಗಿದ್ದಾರೆ.
ಸಂಜೆಯೊಳಗೆ ದ.ಕ. ಜಿಲ್ಲಾಧಿಕಾರಿ ಸಂಜೆಯ ವೇಳೆಗೆ ಗ್ರಾಮಕ್ಕೆ ಭೇಟಿ ನೀಡಲಿದ್ದು, ಗ್ರಾಮ ಪಂಚಾಯತ್ ಕಚೇರಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸದಸ್ಯರು, ಅಭಿವೃದ್ದಿ ಅಧಿಕಾರಿ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಹಿತ ತಾಲೂಕು ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಮನೆಯಿಂದ ಗ್ರಾಮದ ಯಾರೂ ಕೂಡಾ ಹೊರಬರಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಿರುವ ಪೊಲೀಸರು, ಗ್ರಾಮದ ಯಾವುದೇ ಮನೆಗೆ ದಿನಸಿ, ಹಾಲು, ಔಷಧ ಸಹಿತ ದಿನಬಳಕೆಯ ಅಗತ್ಯ ವಸ್ತುಗಳನ್ನು ಬೇಕಾದರೆ ಸ್ಥಳೀಯ 13 ಅಂಗಡಿಗಳ ಪಟ್ಟಿಯನ್ನು ತಯಾರಿಸಲಾಗಿದೆ. ಪಟ್ಟಿಯಲ್ಲಿ ಅಂಗಡಿ ಮಾಲಕರ ಹೆಸರು, ಮೊಬೈಲ್ ಸಂಖ್ಯೆ ಇದ್ದು ವಾಟ್ಸಾಪ್ನಲ್ಲಿ ಗ್ರಾಮದ ಜನರಿಗೆ ಕಳುಹಿಸಲಾಗಿದೆ. ಅಲ್ಲದೇ, ಪ್ರಿಂಟ್ ತೆಗೆದು ಗ್ರಾಮದ ವಿವಿದೆಡೆ ಅಂಟಿಸಲಾಗಿದೆ. ಸಾಮಾಗ್ರಿ ಬೇಕಾದವರು ಅಂಗಡಿಯವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸಾಮಾಗ್ರಿಗಳ ಪಟ್ಟಿ ನೀಡಬೇಕು. ಸಾಮಾಗ್ರಿಗಳನ್ನು ಅಂಗಡಿಯಾತ ಅಥವಾ ಗ್ರಾಮ ಪಂಚಾಯತ್ ಸದಸ್ಯರು ಆಯಾಯ ಮನೆಗೆ ತಲುಪಿಸಿದ್ದಾರೆ ಎಂದು ಸೂಚಿಸಿದ್ದಾರೆ.
ಆಶಾ ಕಾರ್ಯಕರ್ತರ ತಂಡವೊಂದನ್ನು ರಚಿಸಿದ್ದು, ಗ್ರಾಮದ ಎಲ್ಲಾ ಮನೆಗಳಿಗೆ ಈ ತಂಡದ ಸದಸ್ಯರು ಭೇಟಿ ನೀಡಿ ಮನೆ ಮಂದಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಅಲ್ಲದೇ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.
ಗಸಜಿಪನಡು ಗ್ರಾಮದ ಯಾರೂ ಗ್ರಾಮದಿಂದ ಹೊರಗೆ ಹೋಗದಂತೆ ಹಾಘೂ ಹೊರಗಿನ ಯಾರೂ ಗ್ರಾಮಕ್ಕರ ಬಾರದಂತೆ ಪೊಲೀಸರು ಬಂದೋಬಸ್ತ್ ಮಾಡಿದ್ದಾರೆ. ಸಜಿಪನಡು ಹಾಗೂ ಕುಕ್ಕಾಜೆ ಗ್ರಾಮದ ರಸ್ತೆಗೆ ಕಲ್ಲುಗಳಲ್ಲಿ ಅಡ್ಡವಾಗಿ ಇಟ್ಟು ವಾಹನಗಳ ಸಂಚಾರವನ್ನು ಕೂಡಾ ನಿರ್ಬಂಧಿಸಲಾಗಿದೆ.