ಉಳ್ಳಾಲ, ಫೆ 26: ಮಧ್ಯವಯಸ್ಕರೇ ಸ್ಪರ್ಧಿಸಲಿರುವ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ, ಅವರನ್ನು ಎದುರಿಸಲು ಸಿಪಿಎಂ ವಿಭಿನ್ನ ಕಸರತ್ತು ನಡೆಸಿದೆ. 25 ರ ಹರೆಯದ ಯುವ ವಕೀಲ , ಕಾಲೇಜು ಜೀವನದಲ್ಲಿ ಎಸ್ ಎಫ್ ಐ ಮುಖಂಡನಾಗಿ ಹಲವು ಹೋರಾಟಗಳ ನೇತೃತ್ವ ವಹಿಸಿ, ಇದೀಗ ಡಿವೈಎಫ್ ಐ ನ ಜಿಲ್ಲಾ ಕಾರ್ಯದರ್ಶಿಯಾಗಿರುವ ನಿತಿನ್ ಕುತ್ತಾರ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.
ಬಿ.ಕಾಂ ನಡೆಸಿ ಎಲ್ ಎಲ್ ಬಿ ಪದವೀಧರರಾಗಿರುವ ನಿತಿನ್, 2006 ರಲ್ಲಿ 8 ನೇ ತರಗತಿಯಿಂದಲೇ ಎಸ್ ಎಫ್ ಐ ವಿದ್ಯಾರ್ಥಿ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗಿಯಾದವರು. 2010 ರಲ್ಲಿ ಎಸ್ ಎಫ್ ಐ ನ ಉಳ್ಳಾಲ ವಲಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಬಳಿಕ ಸಿಪಿಎಂ ಸದಸ್ಯತ್ವ ಹೊಂದಿದ ಅವರು 2011 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ತರಗತಿ ಪ್ರತಿನಿಧಿಯಾಗಿ ಚುನಾವಣೆ ಮೂಲಕ ಆಯ್ಕೆಗೊಂಡವರು. ಎಸ್ ಎಫ್ ಐ ಜಿಲ್ಲಾಧ್ಯಕ್ಷನಾಗಿಯೂ ಸೇವೆ ಸಲ್ಲಿಸಿರುವ ನಿತಿನ್ ವಿ.ವಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷೀಯ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು. ವೃತ್ತಿ ಜೀವನ ಆರಂಭಿಸಿದ ದಿನಗಳಿಂದ ಡಿವೈ ಎಫ್ ಐ ನ ಜಿಲ್ಲಾ ಜತೆ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಪ್ರೌಢಶಾಲಾ ಶಿಕ್ಷಣದ ಸಮಯದಲ್ಲಿ ಕಾರ್ಮಿಕರ ಪರ ಹೋರಾಟಗಳಲ್ಲಿ ಪಿಕೆಟಿಂಗ್ ನಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಅವರು 2012ರಲ್ಲಿ ಆಗಿನ ಬಿಜೆಪಿ ಸರಕಾರ ಪ್ರೊ. ಗೋವಿಂದ ವರದಿಯ ಪ್ರಕಾರ ರಾಜ್ಯದ 12,000ಶಾಲೆಗಳನ್ನು ಮುಚ್ಚಲು ಹೊರಟಾಗ ನ.1 ರಂದು ತನ್ನ ನೇತೃತ್ವದಲ್ಲಿ ನೆಹರೂ ಮೈದಾನದಲ್ಲಿ ಹೋರಾಟ ನಡೆಸಿದ ಫಲವಾಗಿ ಶಾಲೆಗಳನ್ನು ಉಳಿಸಿದ ಕೀರ್ತಿ ಇದೆ ಅನ್ನುತ್ತಾರೆ ಪಕ್ಷದ ಮುಖಂಡರು .
ಸೌಜನ್ಯ ಕೊಲೆ ಪ್ರಕರಣ, ಕಾವ್ಯ ಪೂಜಾರಿ ಅಸಹಜ ಸಾವಿನ ಸೂಕ್ತ ತನಿಖೆಗೆ ಒತ್ತಾಯಿಸಿ ನಡೆದ ಹೋರಾಟದ ನೇತೃತ್ವ, ಉಳ್ಳಾಲದಲ್ಲಿ ಅಮಾಯಕ ವಿದ್ಯಾರ್ಥಿಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸಿದಾಗ ಹೋರಾಟ, ಬಂಟ್ವಾಳ, ಬಜ್ಪೆ, ಮಂಗಳೂರಿನಲ್ಲಿರುವ ಹಾಸ್ಟೆಲ್ ಸೌಕರ್ಯಗಳಿಗಾಗಿ ವಿದ್ಯಾರ್ಥಿಗಳ ಪರ ಹೋರಾಟ, 2015ರಲ್ಲಿ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿ, ಪೋಷಕರನ್ನು ಸಂಘಟಿಸಿ ಹೋರಾಟ, 2016 ರಲ್ಲಿ ಬಡ ಭೂ ರಹಿತರ ಪರವಾಗಿ ರೈತ ಸಂಘ ನಡೆಸಿದ ಭೂಮಿಗಾಗಿ ಹೋರಾಟದಲ್ಲಿ ಎರಡು ದಿನಗಳ ಜೈಲು ವಾಸ, ಉಳ್ಳಾಲದಲ್ಲಿ ನಡೆಯುತ್ತಿರುವ ಮಾದಕ ವಸ್ತುಗಳ ಜಾಲದ ವಿರುದ್ಧ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಇವೆಲ್ಲವನ್ನು ಮುಂದಿಟ್ಟುಕೊಂಡು ಪಕ್ಷದ ಸರ್ವಾನುಮತದಿಂದ ಯುವ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ ಅನ್ನುವುದು ಪಕ್ಷದ ಮುಖಂಡರ ಅಭಿಪ್ರಾಯವಾಗಿದೆ. ಉಳ್ಳಾಲ ಭಾಗದಲ್ಲಿ ಯುವ ಮತದಾರರು ಹಾಗೂ ವಿದ್ಯಾರ್ಥಿ ಮತದಾರರು ಅನೇಕರಿದ್ದು, ಬದಲಾವಣೆ ಬಯಸಿರುವ ಅವರು ಸಿಪಿಎಂ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ ಅನನುವ ವಿಶ್ವಾಸದಲ್ಲಿ ಸಿಪಿಎಂ ಇದೆ.