ಭಟ್ಕಳ, ಮಾ 28 (Daijiworld News/MSP): ಭಟ್ಕಳದಲ್ಲಿ ಮತ್ತೆ ಮೂವರಲ್ಲಿ ಕೋವಿಡ್- 19 ಸೋಂಕು ಇರುವುದು ದೃಢಪಟ್ಟಿದ್ದು ಜನರಿಗೆ ಸೋಂಕು ಹರಡದಂತೆ ಉತ್ತರ ಕನ್ನಡದ ಭಟ್ಕಳ ವ್ಯಾಪ್ತಿಯಲ್ಲಿ ಹೆಲ್ತ್ ಎಮರ್ಜೆನ್ಸಿ ಘೋಷಿಸಲಾಗಿದೆ. ದುಬೈನಿಂದ ಹಿಂತಿರುಗಿದ್ದ ಸುಮಾರು 65 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ. ಇದೀಗ ಈ ವ್ಯಕ್ತಿಯ ಕುಟುಂಬದವರಿಗೆ ಸೋಂಕು ಇರುವುದು ದೃಢಪಟ್ಟಿದೆ.
ಈತನ 55 ವರ್ಷದ ಪತ್ನಿ , 22 ಹಾಗೂ 28 ವರ್ಷ ಪುತ್ರಿಯರಿಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟಾರೆ ಈಗ ಭಟ್ಕಳ ಮೂಲದ ಏಳು ಜನರಲ್ಲಿ ಸೋಂಕು ಇರುವುದು ದೃಢಪಟ್ಟಂತಾಗಿದೆ. ಸೋಂಕಿತರೆಲ್ಲರನ್ನೂ ಕಾರವಾರದ ಪತಂಜಲಿ ನೌಕಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಮೊದಲ ಸೋಂಕಿತ ವ್ಯಕ್ತಿ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಮಾರ್ಚ್ 19ರಂದು ಸ್ಪೈಸ್ ಜೆಟ್ ವಿಮಾನದ ಮೂಲಕ ಬೆಳಗ್ಗೆ 5.45ಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಪರೀಕ್ಷೆಗೊಳಪಡಿಸಿದಾಗ ವೈರಸ್ ಲಕ್ಷಣಗಳನ್ನು ಕಾಣಿಸಿಕೊಂಡಿದ್ದು, ನೇರವಾಗಿ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಮುಂದುವರಿದಿದೆ.
ಎರಡನೇ ಪ್ರಕರಣದಲ್ಲಿ 40 ವರ್ಷದ ಭಟ್ಕಳ ಮೂಲದ ವ್ಯಕ್ತಿ ದುಬೈನಿಂದ ವಿಮಾನದಲ್ಲಿ ಬಂದು 21ಕ್ಕೆ ಮಂಗಳೂರಿನಲ್ಲಿ ಬೆಳಿಗ್ಗೆ 6.30ಕ್ಕೆ ಇಳಿದಿದ್ದರು. ಅವರ ಸಂಬಂಧಿಯೊಬ್ಬರ ಕಾರಿನಲ್ಲಿ ಭಟ್ಕಳಕ್ಕೆ ಬಂದಿದ್ದ ಅವರು, ಮಧ್ಯಾಹ್ನ ತಾವೇ ಸ್ವಯಂಪ್ರೇರಿತವಾಗಿ ಭಟ್ಕಳ ತಾಲೂಕಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ಲಕ್ಷಣ ಕಂಡು ಬಂದಿದ್ದರಿಂದ ಗಂಟಲಿನ ದ್ರವವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮಾ.23ರಂದು ವರದಿ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿತ್ತು.
ಇನ್ನೊಂದು ಪ್ರಕರಣದಲ್ಲಿ 65 ವರ್ಷದ ಭಟ್ಕಳ ಮೂಲದ ಇವರು, ದುಬೈನಿಂದ 19ಕ್ಕೆ ಮುಂಬೈಗೆ ಬಂದು ಇಳಿದಿದ್ದರು. ಅಲ್ಲಿಂದ ಮಂಗಳೂರು ಎಕ್ಸ್ಪ್ರೆಸ್ ರೈಲಿನಲ್ಲಿ ಭಟ್ಕಳಕ್ಕೆ 20ಕ್ಕೆ ಬಂದು ಇಳಿದಿದ್ದರು. ರೈಲು ನಿಲ್ದಾಣದಿಂದ ಆಟೊ ರಿಕ್ಷಾದಲ್ಲಿ ಮಗನ ಜೊತೆಗೆ ಮನೆಗೆ ತೆರಳಿದ್ದರು. 21ರಂದು ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ಮಾಡಿದ್ದರು. ಆದರೆ, ಯಾವುದೇ ಲಕ್ಷಣ ಕಂಡು ಬಂದಿರಲಿಲ್ಲ. ಎರಡು ದಿನದ ಬಳಿಕ ಜ್ವರ ಸೇರಿದಂತೆ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆ ಅವರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಭಟ್ಕಳ ತಾಲೂಕಾ ಆಸ್ಪತ್ರೆಗೆ ದಾಖಲಿಸಿದ್ದರು. ಅವರ ಗಂಟಲಿನ ದ್ರವವನ್ನೂ ಬೆಂಗಳೂರಿಗೆ ಕಳುಹಿಸಲಾಗಿತ್ತು. ಮಾ.23ರಂದು ವರದಿ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿತ್ತು.
ಮತ್ತೊಂದು ಪ್ರಕರಣದಲ್ಲಿ ದುಬೈನಿಂದ 20ರಂದು ಗೋವಾ ದಾಬೋಲಿಯಮ್ ವಿಮಾನ ನಿಲ್ದಾಣಕ್ಕೆ ಬಂದಿಲಿಳಿದಿದ್ದ 22 ವರ್ಷದ ಯುವಕ, ಕಾರವಾರದ ಹೋಟೆಲ್ ವೊಂದರಲ್ಲಿ ಉಪಹಾರ ಸೇವಿಸಿ ಸಹೋದರನ ಜೊತೆಯಲ್ಲಿ ಭಟ್ಕಳಕ್ಕೆ ತೆರಳಿದ್ದ. ಈತನಲ್ಲೂ ಸೋಂಕು ಇರುವುದು ದೃಢಪಟ್ಟಿದೆ.