ಕಾಸರಗೋಡು, ಮಾ 28 (Daijiworld News/MSP): ಕಾಸರಗೋಡಿನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಶುಕ್ರವಾರ ಬಂದ ವೈದ್ಯಕೀಯ ವರದಿಯಲ್ಲಿ 34 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು . ಇವರಲ್ಲಿ ಕಾಞ೦ಗಾಡ್ ದುರ್ಗಾ ಹಯರ್ ಸೆಕಂಡರಿ ಶಾಲೆಯ ವಿದ್ಯಾರ್ಥಿಯೂ ಒಳಗೊಂಡಿದ್ದಾನೆ.
ಮಾರ್ಚ್ 17 ರ ತನಕ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು, ಆ ಬಳಿಕ ಸರ್ಕಾರ ಪರೀಕ್ಷೆ ಮುಂದೂಡಿತ್ತು. ಸೋಂಕಿತ ವಿದ್ಯಾರ್ಥಿಯ ತಂದೆಯಲ್ಲಿ ಕೊರೊನಾ ಕಂಡುಬಂದಿತ್ತು.
ವಿದ್ಯಾರ್ಥಿಯ ತಂದೆ ಮಾರ್ಚ್ 17 ರಂದು ವಿದೇಶದಿಂದ ಹಿಂತಿರುಗಿದ್ದರು. ಮಾರ್ಚ್ 23 ರಂದು ಕೊರೋನಾ ದೃಢಪಟ್ಟಿತ್ತು . ಬಳಿಕ ಈಗ ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ನಡುವೆ ವಿದ್ಯಾರ್ಥಿ ಜೊತೆ ಪರೀಕ್ಷೆ ಬರೆದ ಸಹಪಾಠಿಗಳನ್ನು ಮನೆಗಳಲ್ಲಿ ನಿಗಾದಲ್ಲಿರಿಸಲಾಗಿದೆ . ಜಿಲ್ಲೆಯಲ್ಲಿ ಒಟ್ಟು 81 ಪ್ರಕರಣಗಳು ಈಗಾಗಲೇ ದೃಢಪಟ್ಟಿದೆ .
9 ಮಂದಿ ಮಹಿಳೆಯರು, 25 ಮಂದಿ ಪುರುಷರು
ಕೊರೋನಾ ಸೋಂಕು ಬಾಧೆ ಖಚಿತಗೊಂಡವರಲ್ಲಿ 9 ಮಂದಿ ಮಹಿಳೆಯರು, 25 ಮಂದಿ ಪುರುಷರುಇದ್ದಾರೆ. ಇವರಲ್ಲಿ 11 ಮಂದಿ ಸಂಪರ್ಕ ಪಟ್ಟಿಯಲ್ಲಿರುವವರು, 23 ಮಂದಿ ದುಬೈಯಿಂದ ಹಿಂತಿರುಗಿದವರಾಗಿದ್ದಾರೆ. ಸೋಂಕಿತರಲ್ಲಿ 11 ವರ್ಷ ಪ್ರಾಯದಿಂದ 56 ವರ್ಷ ವಯಸ್ಸಿನವರು ಒಳಗೊಂಡಿದ್ದಾರೆ. ಸೋಂಕು ಬಾಧಿತರು ಕಲ್ಲಿಂಗಾಲ್, ಉದುಮಾ, ಚೆಂಗಳ, ಚಟ್ಟಂಚಾಲ್, ಪೂಚಕ್ಕಾಡ್, ಎರಿಯಾಲ್, ಕಳನಾಡು, ಬೋವಿಕ್ಕಾನ, ಪಯ್ಯಾಳಿ, ಕೆಲ್, ವಿದ್ಯಾನಗರ, ಚೆಮ್ನಾಡ್, ಬೇವಿಂಜೆ ಪಿಲಿಕುಂಜೆ, ಚೂರಿ ಪಳ್ಳಂ, ಕಾಸರಗೋಡು ತುರ್ತಿ, ಮುಳಿಯಾರು, ಮಂಜೇಶ್ವರ, ಪಡನ್ನ, ಬಾರ, ಅಲಾಮಿಪಳ್ಳಿ, ಕೊಲ್ಲಂಬಾಡಿ, ಮಂಜತ್ತಡ್ಕ, ನೆಲ್ಲಿಕುಂಜೆ, ತಳಂಗರೆ ನಿವಾಸಿಗಳಾಗಿದ್ದಾರೆ.