ಉಡುಪಿ, ಮಾ.28 (Daijiworld News/MB) : ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತದಾದ್ಯಂತ ಲಾಖ್ಡೌನ್ ಮಾಡಲಾಗಿದ್ದು ಈ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಹಾಗೂ ಮಾಧ್ಯಮದವರಿಗೆ ಪಡುಬಿದ್ರಿ ಕಂಚಿನಡ್ಕದ ಭಾರತ್ ಪೆಟ್ರೋಲಿಯಮ್ ಸಂಸ್ಥೆಯಲ್ಲಿ ಉಚಿತ ಪೆಟ್ರೋಲ್, ಡಿಸೇಲ್ ವಿತರಣೆ ನಡೆಯಿತು.
ಜಗಜೀವನ್ ಚೌಟ ಇವರ ಮಾಲಿಕತ್ವದ ಪೆಟ್ರೋಲ್ ಬಂಕ್ನಲ್ಲಿ ಸಾಮಾಜಿಕ ಕಳಕಳಿಯಿಂದ ಶನಿವಾರ ಬೆಳಿಗ್ಗೆ 9 ರಿಂದ ಮದ್ಯಾಹ್ನ 12 ಗಂಟೆ ವರೆಗೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಕರೋನಾ ಸೋಕು ಸಂಬಂಧಿ ಕರ್ತವ್ಯ ದಲ್ಲಿರುವ ಪೋಲೀಸರು, ಆರೋಗ್ಯ ಅಧಿಕಾರಿಗಳು ಹಾಗೂ ಮಾಧ್ಯಮದವರಿಗಾಗಿ ಉಚಿತ ಪೆಟ್ರೋಲ್ ಮತ್ತು ಡಿಸೇಲ್ ವಿತರಿಸಿದರು.
ಈ ಸಂದರ್ಭ ಕಾಪು ಪ್ರೆಸ್ ಕ್ಲಬ್ ಸದಸ್ಯ ಕರುಣಾಕರ್ ಮಾತನಾಡಿ ಇದೊಂದು ಉತ್ತಮ ಸೇವಾ ಕಾರ್ಯ. ಕರೋನಾ ಸೋಂಕು ತಡೆಗಟ್ಟುವ ಪ್ರಯತ್ನದಲ್ಲಿ ಎಲ್ಲರೂ ಕರ್ತವ್ಯ ನಿರತರಾಗಿದ್ದಾರೆ. ಅದರಲ್ಲೂ ಮಾಧ್ಯಮದ ಮಂದಿ ಯಾವುದೇ ಸಂದರ್ಭದಲ್ಲಿ ಕೂಡಾ ತಮ್ಮ ಕರ್ತವ್ಯ ಮರೆತಿಲ್ಲ. ಇಂಥಹ ಸಂದಿಗ್ದ ಪರಿಸ್ಥಿತಿಯಲ್ಲಿ ಆದಾಯವೂ ಇಲ್ಲದೆ ಕರ್ತವ್ಯದಲ್ಲಿರುವ ಮಾಧ್ಯಮದವರಿಗೆ ಈ ಸೇವೆ ಬಹಳ ಉಪಯುಕ್ತವಾಗಿದೆ. ಎಲ್ಲಾ ಊರುಗಳ ಪೆಟ್ರೋಲ್ ಬಂಕ್ ಮಾಲಕರು ಇದೇ ರೀತಿ ಮಾಡಿದರೆ ಉತ್ತಮ ಎಂದರು.