ಮಂಗಳೂರು, ಮಾ.28 (DaijiworldNews/PY) : ಕೊರೊನಾ ಸೋಂಕು ವ್ಯಾಪಿಸದಂತೆ ದೇಶಾದ್ಯಂತ ಲಾಕ್ಡೌನ್ ಹಾಕಲಾಗಿದ್ದು, ಹಲವಾರು ಕೂಲಿ ಕಾರ್ಮಿಕರು, ನಿರ್ಗತಿಕರು ಊಟವಿಲ್ಲದೇ ಪರದಾಡುತ್ತಿದ್ದಾರೆ. ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಆಯ್ದ ಎ ದರ್ಜೆ ದೇವಸ್ಥಾನಗಳಿಂದ ಇವರಿಗೆ ಸಹಾಯವಾಗುವಂತೆ ಊಟ ಉಪಹಾರ ಸರಬರಾಜು ಆಗುವಂತೆ ಇಲಾಖೆ ಆಯುಕ್ತರಿಗೆ ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸೂಚನೆ ನೀಡಿದ್ದಾರೆ.
ಇಂತಹ ಸಂಕಷ್ಟಕ್ಕೆ ಒಳಗಾದವರು ಯಾವ ಪ್ರದೇಶದಲ್ಲಿ ಇದ್ದಾರೋ, ಅವರಿಗೆ ಉಪಹಾರ ಹಾಗೂ ಊಟವನ್ನು ಸಿದ್ದಪಡಿಸಿ, ಪ್ಯಾಕೇಟ್ಗಳ ಅನುಸಾರ ಅಥವಾ ಸ್ಥಳೀಯ ಜಿಲ್ಲಾಡಳಿತ ನಿರ್ಧರಿಸಿದಂತೆ ಪ್ರಾದೇಶಿಕವಾರು ಸಂದರ್ಭಕ್ಕೆ ಅನುಗುಣವಾಗಿ ಆಹಾರ ನೀಡಬೇಕು ಎಂದು ತಿಳಿಸಿದ್ದಾರೆ.