ಮಂಗಳೂರು, ಮಾ 28 (Daijiworld News/MSP): ಮಾರ್ಚ್ 22ರಿಂದ ಭಾರತ ಲಾಕ್ ಡೌನ್ ಸ್ಥಿತಿ ಘೋಷಣೆಯಾದ ಬಳಿಕದಿಂದ ದ.ಕ ಮತ್ತು ಉಡುಪಿಯಲ್ಲಿ ಜೀವಭಯದಿಂದ ದಿನದೂಡುವಂತಾಗಿದೆ. ಉಭಯ ಜಿಲ್ಲೆಯಲ್ಲಿ ಕರ್ಪ್ಯೂ ಸ್ಥಿತಿ ಇರುವ ಹಿನ್ನಲೆಯಲ್ಲಿ ಪ್ರತೀದಿನ ಒಂದು ಲಕ್ಷ ಲೀಟರ್ ಹಾಲು ಮಾರಾಟ ಕಡಿಮೆಯಾಗಿದೆ. ಮಾತ್ರವಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ವೈರಸ್ ಹಾವಳಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮಾರ್ಚ್ 28ರಿಂದ ಜಿಲ್ಲೆಯಾದ್ಯಂತ ಅಗತ್ಯ ವಸ್ತುಗಳ ಪೂರೈಕೆಯನ್ನೂ ಸ್ಥಗಿತಗೊಳಿಸಿ ಸಂಪೂರ್ಣ ಬಂದ್ ಪರಿಸ್ಥಿತಿ ಘೋಷಿಸಿದೆ.
ಈ ಹಿನ್ನಲೆಯಲ್ಲಿ ಮಾರ್ಚ್ 28ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಂದಿನಿ ಹಾಲಿನ ಬೂತ್ ಗಳು ಗ್ರಾಹಕರಿಗೆ ಸಮರ್ಪಕ ಸೇವೆ ನೀಡಲು ಸಾಧ್ಯವಾಗದೇ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಸಂಪೂರ್ಣಕುಂಠಿತಗೊಂಡಿದೆ. ಒಕ್ಕೂಟಗಳಿಂದ ಸ್ವೀಕರಿಸುವ ಹಾಲನ್ನು ಪರಿವರ್ತನ ಘಟಕಗಳಿಗೆ ಕಳುಹಿಸಿದ್ದು ಅಲ್ಲೂ ದಾಸ್ತಾನು ಹೆಚ್ಚಳವಾಗಿದ್ದು ಇದರಿಂದ ತಕ್ಷಣ ಪರಿವರ್ತನೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಒಕ್ಕೂಟ ಸಂಘಗಳಿಂದ ಹಾಲನ್ನು ಸ್ವೀಕರಿಸಿ ದಾಸ್ತಾನು ಇಡಲು ಸಾಧ್ಯವಾಗುವುದಿಲ್ಲ
ಈ ಕಾರಣದಿಂದ ಪ್ರಸ್ತುತ ಪರಿಸ್ಥಿತಿಯನ್ನು ಸರಿದೂಗಿಸುವ ಅನಿವಾರ್ಯತೆಯಿಂದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಾರ್ಚ್ 29 ಮತ್ತು ಮಾರ್ಚ್ 30 ರಂದು ಬೆಳಿಗ್ಗೆ ಹಾಗೂ ಸಾಯಂಕಾಲದ ಎರಡೂ ಸರದಿಗಳಲ್ಲಿ ಉಭಯ ಜಿಲ್ಲೆಗಳ ಹಾಲು ಉತ್ಪಾದಕರಿಂದ ಹಾಲು ಖರೀದಿಸುವುದನ್ನು ಸ್ಥಗಿತಗೊಳಿಸಿದೆ. ಆದರೆ ಈ ಸಂದರ್ಭದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ.