ಮಂಗಳೂರು,ಮಾ 28 (Daijiworld News/MSP): ಕೊರೊನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ದ.ಕ ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು ಶನಿವಾರದ ಮಟ್ಟಿಗೆ ದ.ಕ ಕೊಂಚ ನಿರಾಳವಾಗಿದೆ. ಜಿಲ್ಲೆಯಲ್ಲಿ 25 ಮಂದಿಯ ಮಾದರಿಯನ್ನು ಪರೀಕ್ಷೆಗಾಗಿ ರವಾನಿಸಿದ್ದು ಇದರಲ್ಲಿ 15 ಜನರ ವರದಿ ಶನಿವಾರ ಬಂದಿದ್ದು ಎಲ್ಲವೂ ನೆಗೆಟಿವ್ ರಿಪೋರ್ಟ್ ಬಂದಿದ್ದು ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ ಎನ್ನುವುದು ಆಶಾದಾಯಕ ವಿಚಾರ. ನೆರೆಯ ಜಿಲ್ಲೆ ಕಾಸರಗೋಡಿನಲ್ಲಿ ಶುಕ್ರವಾರ ಒಂದೇ ದಿನ 34 ಪತ್ತೆಯಾಗಿ ಜಿಲ್ಲೆಯಲ್ಲೂ ಭೀತಿಗೆ ಕಾರಣವಾಗಿತ್ತು.
ಆದರೆ ನೆರೆಯ ಜಿಲ್ಲೆಯಾದ ಕಾಸರಗೋಡಿನಲ್ಲಿ ಶನಿವಾರ ಒಂದೇ ಒಂದು ಹೊಸ ಪ್ರಕರಣ ಪತ್ತೆಯಾಗಿದ್ದು ಕೊಂಚ ನಿರಾಳ ಮೂಡಿಸಿದೆ. ಇನ್ನು ದ.ಕ ಜಿಲ್ಲೆಯಾದ್ಯಂತ ಒಟ್ಟು ಈವರೆಗೆ 58,209 ಜನರನ್ನು ತಪಾಸಣೆ ಮಾಡಲಾಗಿದೆ. ಇಂದಿನವರೆಗೆ 3,164 ಮಂದಿಯನ್ನು ಹೋಮ್ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಯಾರು ಇರದಿದ್ದರೂ ಈ.ಎಸ್. ಐ ಆಸ್ಪತ್ರೆಯಲ್ಲಿ 29 ಮಂದಿಯನ್ನು ವೈದ್ಯಕೀಯ ನಿಗಾ ಸ್ಥಿತಿಯಲ್ಲಿ ಇರಿಸಲಾಗಿದೆ.
ಇನ್ನು ಜಿಲ್ಲೆಯಲ್ಲಿ 20 ಮಂದಿ 28 ದಿನಗಳ ಹೋಮ್ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. 6 ಮಂದಿಯಲ್ಲಿ ಕೊರೊನಾ ಶಂಕಿತ ಪ್ರಕರಣಗಳು ಕಂಡು ಬಂದಿದ್ದು, ಅವರಿಗೆ ಅಗತ್ಯ ಚಿಕಿತ್ಸೆ ನೀಡುವುದನ್ನು ಮುಂದುವರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.