ಉಡುಪಿ, ಮಾ.28 (Daijiworld News/MB) : ಕೊರೊನಾ ಹರಡದಂತೆ ತಡೆಯುವ ನಿಟ್ಟಿನಲ್ಲಿ ಜಿಲ್ಲೆಗೆ ವಿದೇಶದಿಂದ ಬಂದಿರುವವರಿಗೆ ವಿಧಿಸಲಾಗಿರುವ ಹೋಮ್ ಕ್ವಾರಂಟೈನ್ ನಿರ್ಬಂಧವನ್ನು ಉಲ್ಲಂಘನೆ ಮಾಡಿದ್ದಲ್ಲಿ ಅವರ ಪಾಸ್ಪೋರ್ಟ್ ಗಳನ್ನು ಮುಟ್ಟುಗೋಲು ಹಾಕಿ ಮುಂದಿನ ವಿದೇಶ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಈಗಾಗಲೇ ಜಿಲ್ಲಾ ವ್ಯಾಪ್ತಿಯಲ್ಲಿ ಸಿಆರ್ಪಿಸಿ ಸೆಕ್ಷನ್ 144(3)ರಂತೆ ನಾಗರಿಕರ ಸಂಚಾರವನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ವಿದೇಶಗಳಿಂದ ಹಾಗೂ ಹೊರರಾಜ್ಯಗಳಿಂದ ಬಂದಿರುವ ಹಾಗೂ ಜಿಲ್ಲೆಯಲ್ಲಿ ಸೋಂಕು ತಗಲಿರುವ ಬಗ್ಗೆ ಅನುಮಾನಾಸ್ಪದ ವ್ಯಕ್ತಿಗಳು ಚಿಕಿತ್ಸೆ ಗಾಗಿ ಮನೆಯಲ್ಲೇ ನಿರ್ಬಂಧದಲ್ಲಿ ಇರುವಂತೆ ತಿಳಿಸಲಾಗಿದೆ.
ಗ್ರಾಮಕರಣಿಕರು, ಕಂದಾಯ ನಿರೀಕ್ಷಕರು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಕನಿಷ್ಠ ಮೂರು ಭಾರಿ ಅಂಥವರ ಮನೆಗಳಿಗೆ ಭೇಟಿ ನೀಡುವಂತೆ ನಿರ್ದೇಶನ ನೀಡಲಾಗಿದೆ. ಆದೇಶಗಳನ್ನು ಪಾಲಿಸದೇ ಇರುವ ಹೋಮ್ ಕ್ವಾರಂಟೈನ್ನಲ್ಲಿ ಇರುವ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸುವ ಅಧಿಕಾರವನ್ನು ಈಗಾಗಲೇ ನೀಡಲಾಗಿದೆ.
ಹಾಗಿದ್ದರೂ ಹೋಮ್ ಕ್ವಾರಂಟೈನ್ನಲ್ಲಿ ಇರಬೇಕಾದ ಹಲವಾರು ಮಂದಿ ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಡುತ್ತಿರುವ ಬಗ್ಗೆ ತಿಳಿದು ಬಂದಿದೆ, ದೂರುಗಳು ಕೂಡಾ ಬರುತ್ತಿದೆ. ಇಂಥ ವ್ಯಕ್ತಿಗಳು ನಿರ್ದೇಂಶನವನ್ನು ಪಾಲಿಸಿ ಮನೆಯಲ್ಲೇ ಇರಬೇಕು. ಆದೇಶ ಉಲ್ಲಂಘನೆ ಮಾಡಿ ಯಾರಾದರೂ ಹೊರಬಂದಲ್ಲಿ ಪಾಸ್ಪೋರ್ಟ್ಗಳನ್ನು ಮುಟ್ಟುಗೋಲು ಹಾಕಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.