ಉಡುಪಿ, ಮಾ.28 (DaijiworldNews/PY) : ಕೊರೊನಾ ವೈರಸ್ ಸೋಂಕಿನ ಪರೀಕ್ಷೆಗಾಗಿ ಜಿಲ್ಲೆಯಲ್ಲಿ ಶನಿವಾರ ಏಳು ಜನ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದು, ರಾಜ್ಯ ಸರ್ಕಾರದ ಹೊಸ ಮಾರ್ಗದರ್ಶಿ ಸೂತ್ರದ ಪ್ರಕಾರ ಕೇವಲ ಇಬ್ಬರ ಗಂಟಲಿನ ದ್ರವದ ಮಾದರಿಯನ್ನು ಸೋಂಕಿನ ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ಚಂದ್ರ ಸೂಡ ಹೇಳಿದ್ದಾರೆ.
ರಾಜ್ಯದ ಪೂರ್ವಾನುಮತಿಯನ್ನು ಶಂಕಿತ ರೋಗಿಯ ಮಾದರಿಗಳ ಪರೀಕ್ಷೆಗೆ ಪಡೆಯಬೇಕಾಗುವುದರಿಂದ ಶನಿವಾರ ಇಬ್ಬರ ಮಾದರಿಗಳನ್ನು ಮಾತ್ರವೇ ಸಂಗ್ರಹಿಸಲಾಗಿದೆ. ಆದ್ದರಿಂದ ಏಳು ಮಂದಿ ಆಸ್ಪತ್ರೆಗೆ ಪರೀಕ್ಷೆಗಾಗಿ ದಾಖಲಾದರೂ ಇಬ್ಬರ ಮಾದರಿಗಳನ್ನು ಮಾತ್ರವೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಶುಕ್ರವಾರ ಪರೀಕ್ಷೆಗೆ ಕಳುಹಿಸಿದ 21 ಮಂದಿಯ ಮಾದರಿಯ ಪರೀಕ್ಷಾ ಫಲಿತಾಂಶ ಬಂದಿಲ್ಲ. ಹಾಗಾಗಿ ಶನಿವಾರದ ಎರಡು ಸೇರಿ ಒಟ್ಟು 23 ಮಂದಿಯ ಪರೀಕ್ಷಾ ವರದಿ ಬರಬೇಕಾಗಿದೆ. ಇಲ್ಲಿಯವರೆಗೆ ಒಟ್ಟು 126 ಮಂದಿಯ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 103 ಮಂದಿಯ ವರದಿ ಬಂದಿದೆ. ಇದರಲ್ಲಿ102 ಮಂದಿಯ ವರದಿ ನೆಗೆಟಿವ್ ಬಂದಿದ್ದು, ಓರ್ವರ ವರದಿ ಮಾತ್ರ ಪಾಸಿಟಿವ್ ಆಗಿದೆ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 1865 ಮಂದಿ ತಪಾಸಣೆಗೆ ಒಳಗಾಗಿದ್ದು, ಶನಿವಾರ ಇವರಲ್ಲಿ 429 ಮಂದಿಯನ್ನು ಹೋಂಕ್ವಾರಂಟೈನ್ನಲ್ಲಿ ಇಡಲಾಗಿದೆ. 14 ದಿನಗಳ ಕಾಲ 663 ಮಂದಿಯ ಹೋಂಕ್ವಾರಂಟೈನ್ ಪೂರ್ಣಗೊಳಿಸಿದ್ದರೆ, 28 ದಿನಗಳ ಕಾಲ 73 ಮಂದಿ ಹೋಂಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕೊರೊನಾ ವೈರಸ್ ಕುರಿತು ಮನೆ ಮನೆಗೆ ತೆರಳಿ ಜನರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುತ್ತಿದ್ದು, ಜಿಲ್ಲೆಯಲ್ಲಿ ಇದುವರೆಗೆ 99,638 ಮನೆಗಳಿಗೆ ಭೇಟಿ ನೀಡಿದ್ದು, 4,43,632 ಮಂದಿಯನ್ನು ಸಂಪರ್ಕಿಸಿ ಸೋಂಕಿನ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ.
ಅದಲ್ಲದೇ, ವಿದೇಶಗಳಿಂದ ಬಂದು ಹೋಂಕ್ವಾರಂಟೈನ್ನಲ್ಲಿ ಇರುವವರನ್ನೂ ಭೇಟಿ ಮಾಡಿ ಅವರಿಗೂ ನಿರ್ದಿಷ್ಟ ಸಮಯದವರೆಗೆ ಮನೆಯಲ್ಲಿಯೇ ಉಳಿಯುವಂತೆ ನೋಡಿಕೊಳ್ಳುತ್ತಿದ್ದಾರೆ.