ಉಳ್ಳಾಲ, ಮಾ.28 (Daijiworld News/MB) : ಜಿಲ್ಲೆಯ ಲಾಕ್ ಡೌನ್ಗೆ ಉಳ್ಳಾಲದಾದ್ಯಂತ ವಾಹನ ಸವಾರರು ರಸ್ತೆಗೆ ಇಳಿಯದೆ ಜಾಗೃತಿ ವಹಿಸಿದ್ದಾರೆ. ಮಂಗಳೂರು-ಕೇರಳ ಹೆದ್ದಾರಿ ತೆರವುಗೊಳಿಸುವ ಕುರಿತು ಕೇಂದ್ರ ಸರ್ಕಾರ ಮಾಹಿತಿ ಕೇಳಿರುವ ವಿಚಾರವೇ ಗಡಿಭಾಗದಲ್ಲಿ ಕೆಲಕಾಲ ಗೊಂದಲಕಾರಿ ವಾತಾವರಣ ಶನಿವಾರ ನಿರ್ಮಿಸಿತು.
ತೊಕ್ಕೊಟ್ಟು, ಉಳ್ಳಾಲ, ತಲಪಾಡಿ, ಕುತ್ತಾರು, ದೇರಳಕಟ್ಟೆ, ಕೋಟೆಕಾರು ಎಲ್ಲಾ ಜಂಕ್ಷನ್ ಗಳು ಇಡೀ ದಿನ ಜನಸಂಚಾರವಿಲ್ಲದೆ ಖಾಲಿಯಾಗಿತ್ತು. ಆದರೂ ದೇರಳಕಟ್ಟೆ ಜಂಕ್ಷನ್ ಮತ್ತು ತೊಕ್ಕೊಟ್ಟು ಒಳಪೇಟೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಸುತ್ತಾಡಲು ಮುಂದಾಗಿದ್ದ ಸುಮಾರು ಐದು ಬೈಕ್ ಸವಾರರನ್ನು ತಡೆದ ಪೊಲೀಸರು ಭಸ್ಕಿ ದಂಡನೆ ವಿಧಿಸಿ ಕಳುಹಿಸಿದ್ದಾರೆ. ಈ ನಡುವೆ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಬಂದಿರುವ ಊಟವನ್ನು ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಉಳಿದುಕೊಂಡಿದ್ದ ಭಿಕ್ಷುಕರಿಗೆ ವಿತರಿಸುವ ಮೂಲಕ ಉಳ್ಳಾಲ ಠಾಣೆಯ ಪೊಲೀಸ್ ಸಿಬ್ಬಂದಿ ರಂಜಿತ್ ಕಾರ್ಯ ಮಾನವೀಯತೆಗೆ ಸಾಕ್ಷಿಯಾಯಿತು.
ಕೇರಳ -ಮಂಗಳೂರು ರಸ್ತೆ ತೆರವುಗೊಳಿಸುವ ಕುರಿತು ಕೇಂದ್ರ ಸರ್ಕಾರ ಜಿಲ್ಲೆಯ ನೋಡೆಲ್ ಅಧಿಕಾರಿಗೆ ಮಾಹಿತಿ ಕೇಳಿದ ಹಿನ್ನೆಲೆಯಿಂದಾಗಿ , ಸಾಮಾಜಿಕ ಜಾಲತಾಣದಲ್ಲಿ ರಸ್ತೆ ಮುಕ್ತವಾಗಿ ಬಿಡಲಾಗಿದೆ ಅನ್ನುವ ಸುಳ್ಳು ಮಾಹಿತಿ ಗಡಿಭಾಗದ ಜನರನ್ನು ಕೆಲಕಾಲ ಆತಂಕಕ್ಕೆ ಒಳಪಡಿಸಿತ್ತು. ಆದರೆ ತಲಪಾಡಿ ಜಂಕ್ಷನ್ ನಲ್ಲಿ 20 ಕ್ಕೂ ಅಧಿಕ ಪೊಲೀಸರು ಠಿಕಾಣಿ ಹೂಡಿ ಕೇರಳ ಭಾಗದ ವಾಹನಗಳನ್ನು ತಡೆಯುತ್ತಲೇ ಇದ್ದಾರೆ. ಅಗತ್ಯ ಸಾಮಾನುಗಳನ್ನು ಹೊತ್ತು ಬರುವ ಲಾರಿಗಳ ಚಾಲಕರನ್ನು ಆರೋಗ್ಯ ಅಧಿಕಾರಿಗಳು ಪರಿಶೀಲನೆ ನಡೆಸಿ ಬಿಡಲಾಗುತ್ತಿದೆ. ದಿನದ 4 ಗಂಟೆಗಳ ಕಾಲ ಪೊಲೀಸರ ಜೊತೆಗೆ ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ನಾಲ್ವರು ಸಿಬ್ಬಂದಿ ನಿರಂತರವಾಗಿ ಕೇರಳ ಕಡೆಯಿಂದ ಬರುವ ಮಂದಿಯ ಪರಿಶೀಲನೆ ನಡೆಸುತ್ತಿದ್ದಾರೆ.
ಲಾರಿಯಲ್ಲಿ ಬಂದ ಮಾನಸಿಕ ಅಸ್ವಸ್ಥನೋರ್ವ ತಲಪಾಡಿ ಗಸ್ತು ನಿರತ ಪೊಲೀಸರ ಬಳಿ ನಿಂತು ಕಿರಿಕ್ ಮಾಡುತ್ತಿದ್ದ. ಪೊಲೀಸರು ಸಮಾಧಾನಿಸಿದರೂ ಕೇಳದೇ ಉಗ್ರ ರೀತಿಯಲ್ಲಿ ವರ್ತಿಸುತ್ತಿದ್ದ ಹಿಂದಿ ಭಾಷಿಗ ಯುವಕ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಖಾಸಗಿ ಬಸ್ಸಿನ ಗಾಜಿಗೆ ಕಲ್ಲು ಹೊಡೆದು ಹಾನಿಗೊಳಿಸಿದ್ದಾನೆ.