ಕಾಸರಗೋಡು , ಮಾ.29 (Daijiworld News/MB) : ಶನಿವಾರ ಜಿಲ್ಲೆಯಲ್ಲಿ ಓರ್ವನಲ್ಲಿ ಮಾತ್ರ ಕೊರೊನಾ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 82 ಕ್ಕೆ ತಲುಪಿದೆ.
ಕೇರಳ ರಾಜ್ಯದಲ್ಲೇ ಶನಿವಾರ ಒಟ್ಟು ಆರು ಪ್ರಕರಣಗಳು ಪತ್ತೆಯಾಗಿದೆ. ತಿರುವನಂತಪುರ ಎರಡು, ಕೊಲ್ಲಂ, ಮಲಪ್ಪುರಂ, ಪಾಲಕ್ಕಾಡ್, ಕಾಸರಗೋಡು ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ.
ಶುಕ್ರವಾರ ಒಂದು ದಿನವೇ ಕಾಸರಗೋಡಿನಲ್ಲಿ 34 ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಆತಂಕ ತೀವ್ರಗೊಂಡಿತ್ತು. ಇದೀಗ ಕೊರೊನಾ ಪ್ರಕರಣದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಇನ್ನು ಜಿಲ್ಲೆಯಲ್ಲಿ 6,511 ಮಂದಿ ನಿಗಾದಲ್ಲಿದ್ದು ಈ ಪೈಕಿ 127 ಮಂದಿ ಆಸ್ಪತ್ರೆಯಲ್ಲಿ ಹಾಗೂ 6,384 ಮಂದಿ ಹೋಂ ಕ್ವಾರೆಂಟೈನ್ ಆಗಿದ್ದಾರೆ. ಒಟ್ಟು ರಾಜ್ಯದಲ್ಲಿ 1,34,370 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 1,33,750 ಮಂದಿ ಮನೆಯಲ್ಲಿದ್ದು, 620 ಮಂದಿ ಆಸ್ಪತ್ರೆಯಲ್ಲಿ ನಿಗಾದಲ್ಲಿ ಇದ್ದಾರೆ.
ಇನ್ನು ಲಾಕ್ಡೌನ್ ಉಲ್ಲಂಘನೆ ಮಾಡಿದ ಕಾರಣದಿಂದಾಗಿ ಕಾಸರಗೋಡಿನಲ್ಲಿ 34 ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದು ಈವರೆಗೆ 55 ಮಂದಿಯನ್ನು ಬಂಧಿಸಿ 18 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.