ಮಂಗಳೂರು, ಮಾ.29 (Daijiworld News/MB) : ಜಗತ್ತಿನೆಲ್ಲೆಡೆ ಆತಂಕಕ್ಕೆ ಕಾರಣವಾಗಿರುವ ಮಹಾಮಾರಿ ಕೊರೊನಾಗೆ ಔಷಧಿ ಅಭಿವೃದ್ಧಿ ಮಾಡುವಲ್ಲಿ ಮಂಗಳೂರು ಮೂಲದ ವೈದ್ಯ ಡಾ. ವಿಶಾಲ್ ರಾವ್ ನೇತೃತ್ವದ ತಂಡ ಅಂತಿಮ ಹಂತ ತಲುಪಿದ್ದಾರೆ ಎಂದು ಬೆಂಗಳೂರಿನ ಎಚ್ಸಿಜಿ ಆಸ್ಪತ್ರೆಯ ಕ್ಯಾನ್ಸರ್ ತಜ್ಞ, ಪ್ರಾದೇಶಿಕ ನಿರ್ದೇಶಕ ಡಾ. ವಿಶಾಲ್ ರಾವ್ ಅವರೇ ತಿಳಿಸಿದ್ದಾರೆ.
ಮಾನವನ ದೇಹದೊಳಗೆ ವೈರಸ್ನ್ನು ನಾಶ ಮಾಡುವ ಇಂಟರ್ ಫೆರೋನ್ (ಪ್ರೊಟೀನ್) ಪದಾರ್ಥದ ಕಣಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಕೊರೊನಾ ಇದ್ದವರಲ್ಲಿ ಈ ಕಣಗಳು ಬಿಡುಗಡೆಯಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಸೋಂಕು ತಗುಲಿದವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದಿರುವುದು ಎಂದು ಹೇಳಿದ್ದಾರೆ.
ಮೂಲತಃ ಮಂಗಳೂರಿನವರಾದ ವೈದ್ಯ ಡಾ. ವಿಶಾಲ್ ಮಂಗಳೂರಿನಲ್ಲೆ ಹುಟ್ಟಿ ಬೆಳೆದು ಕಾಲೇಜು ಶಿಕ್ಷಣವನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಗಿಸಿ ಬೆಳಗಾವಿಯಲ್ಲಿ ಎಂಬಿಬಿಎಸ್ ಮಾಡಿದರು. ಹಾಗೆಯೇ ಮುಂಬೈನ ಟಾಟಾ ಆಸ್ಪತ್ರೆಯಲ್ಲಿ ಎಂಎಸ್ ಹಾಗೂ ಲಂಡನ್ನಲ್ಲಿ ಎಫ್ಆರ್ಸಿಎಎಸ್ ಪದವಿ ಗಳಿಸಿದ್ದಾರೆ.
ವಿಶಾಲ್ ಅವರೊಂದಿಗೆ ಡಾ. ಗುರುರಾಜ ರಾವ್ ಹಾಗೂ ಡಾ. ಜೋತ್ಸ್ನಾ ರಾವ್ ಕೂಡಾ ಕೊರೊನಾಗೆ ಔಷಧಿ ಕಂಡು ಹಿಡಿಯುವಲ್ಲಿ ಕೈಜೋಡಿಸಿದ್ದಾರೆ.
ಇದೊಂದು ಸರಳವಾದ ಚಿಕಿತ್ಸೆಯಾಗಿದೆ. ಇಂಜೆಕ್ಷನ್ ಅಥವಾ ಐವಿ ಮೂಲಕ ದೇಹಕ್ಕೆ ಸೈಟೊಕೈನ್ಗಳನ್ನು ಸೇರಿಸುವ ಮೂಲಕ ವೈರಸ್ ವಿರುದ್ಧ ಶಕ್ತಿಯನ್ನು ದೇಹದ ಜೀವಕಣಗಳಿಗೆ ನೀಡುವುದು. ಆದಷ್ಟು ಬೇಗನೇ ಇದನ್ನು ಪರಿಶೀಲನೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.