ಕಾಸರಗೋಡು, ಮಾ.28 (Daijiworld News/MB) : ಕರ್ನಾಟಕ ಗಡಿಯಲ್ಲಿ ಕೇರಳದ ಆಂಬ್ಯುಲೆನ್ಸ್ಗೆ ನಿರ್ಬಂಧ ಹಾಕಿರುವ ಕಾರಣದಿಂದಾಗಿ ಬಿ.ಸಿ.ರೋಡ್ ಮೂಲದ ಮಹಿಳೆಯೊಬ್ಬರು ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ ಎಂದು ದೂರಲಾಗಿದೆ.
ಬಿ.ಸಿ.ರೋಡ್ ಮೂಲದ ಪಾತುಞಿ (70) ಚಿಕಿತ್ಸೆ ಸಿಗದೆ ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ.
ಅವರು 15 ದಿನಗಳ ಹಿಂದೆ ಬಿ.ಸಿ.ರೋಡಿನಿಂದ ಮಂಜೇಶ್ವರ ಉದ್ಯಾವರದಲ್ಲಿರುವ ಮೊಮ್ಮಗಳ ಮನೆಗೆ ತೆರಳಿದ್ದರು ಎನ್ನಲಾಗಿದ್ದು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರು ಆಸ್ಪತ್ರೆಯೊಂದರ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗಿದೆ.
ಅವರಿಗೆ ಶನಿವಾರ ಸಂಜೆ ಅನಾರೋಗ್ಯವಾಗಿದ್ದು ಮಂಗಳೂರಿನ ಅವರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಮಂಜೇಶ್ವರದಿಂದ ಕರೆದೊಯ್ಯಲಾಗಿದೆ. ಈ ಸಂದರ್ಭದಲ್ಲಿ ಕೇರಳ - ಕರ್ನಾಟಕ ಗಡಿಯಾದ ತಲಪಾಡಿಯಲ್ಲಿ ಪೊಲೀಸರು ಕರ್ನಾಟಕ - ಕೇರಳ ಗಡಿಗೆ ನಿರ್ಬಂಧ ಹೇರಿರುವ ಕಾರಣದಿಂದಾಗಿ ಆಂಬುಲೆನ್ಸ್ಗೂ ಕೂಡಾ ನಿರ್ಬಂಧ ಹೇರಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಆ ಬಳಿಕ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲೆಂದು ಕೇರಳ ಕರ್ನಾಟಕ ಗಡಿಯಾದ ಇತರ ಗಡಿ ಮೂರು ಗಡಿ ಭಾಗಗಳಲ್ಲಿ ಯತ್ನಿಸಿದ್ದು ಪೊಲೀಸರು ಅಲ್ಲಿಯೂ ನಿರ್ಬಂಧಿಸಿದ್ದಾರೆ. ಹಾಗೆಯೇ ಕೇರಳದ ಯಾವ ರೋಗಿಗಳು ನಮಗೆ ಬೇಡ ಎಂದು ಕರ್ತವ್ಯದಲ್ಲಿದ್ದ ಪೊಲೀಸರು ಹೇಳಿದ್ದಾರೆ ಎಂದು ದೂರಲಾಗಿದೆ.
ಬಳಿಕ ವೃದ್ದೆಯನ್ನು ಉದ್ಯಾವರದ ಮೊಮ್ಮಗಳ ಮನೆಗೆ ಹಿಂದಕ್ಕೆ ಕರೆದೊಯ್ಯಲಾಗಿದ್ದು ಇಂದು ಬೆಳಗ್ಗೆ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.