ಸುಬ್ರಹ್ಮಣ್ಯ,ಮಾ 29 (Daijiworld News/MSP): ದೇಶದಾದ್ಯಂತ ಕೊರೊನಾ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದು, ಇದನ್ನು ಉಲ್ಲಂಘಿಸಿ ರಸ್ತೆಗಿಳಿದವರ ಮೇಲೆ ಪೊಲೀಸರು ಲಾಠಿ ಪ್ರಯೋಗ ಮಾಡುತ್ತಿದ್ದಾರೆ.
ಇದೀಗ ಜಿಲ್ಲೆಯ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನಿತ್ಯ ಪೂಜೆಗಾಗಿ ತೆರಳುತ್ತಿದ್ದ ಅರ್ಚಕರ ಮೇಲೂ ಪೊಲೀಸರು ಲಾಠಿ ಏಟು ನೀಡಿ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ.
ಲಾಕ್ ಡೌನ್ ಉಲ್ಲಂಘಿಸಿ ರಸ್ತೆಗೆ ಇಳಿದ್ದಾರೆ ಎಂದು ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಕುಕ್ಕೆ ಸುಬ್ರಹ್ಮಣ್ಯದ ಅರ್ಚಕ ಶ್ರೀನಿವಾಸ್ ಎಂಬವರು ದೂರಿದ್ದಾರೆ.
ಶನಿವಾರ ಸಂಜೆಯ ಪೂಜೆಗಾಗಿ ಆದಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ವೇಳೆ ಪೊಲೀಸರು ತಡೆದು ಪ್ರಶ್ನಿಸಿದ್ದು ಆಗ ಶ್ರೀನಿವಾಸ್ ಪೂಜೆಗೆ ತೆರಳುವುದಾಗಿ ದೇಗುಲದ ಕೀಲಿ ಕೈ ತೋರಿಸಿದರೂ ಕಿವಿಗೊಡದೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ ವಿಪ್ರ ಸಂಘಟನೆ ಅರ್ಚಕರ ಮೇಲೆ ನಡೆದ ಪೊಲೀಸ್ ಹಲ್ಲೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು , ಪೊಲೀಸರ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.