ಬೆಳ್ತಂಗಡಿ, ಫೆ 26 : ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ನಡ ಗ್ರಾಮದ ಗಡಾಯಿಕಲ್ಲು (ಜಮಲಾಬಾದ್) ಕೋಟೆಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ಪ್ರವೇಶವನ್ನು ನಿರ್ಬಂಧಿಸಿದೆ. ಇದರಿಂದ ಪ್ರತಿನಿತ್ಯ ಇಲ್ಲಿಗೆ ಚಾರಣಕ್ಕಾಗಿ ಆಗಮಿಸುವ ಜನರು ನಿರಾಸೆಯಿಂದ ಹಿಂತಿರುಗುವಂತಾಗಿದೆ. ಮೈಸೂರು ಹುಲಿ ಟಿಪ್ಪು ಸುಲ್ತಾನ್ ನಿರ್ಮಿಸಿರುವ ಐತಿಹಾಸಿಕ ಕೋಟೆಯಿರುವ ಜಮಲಾಬಾದ್ ನ ಉಸ್ತುವಾರಿಯನ್ನು ಪ್ರಾಚ್ಯವಸ್ತು ಇಲಾಖೆ, ಪ್ರವಾಸೋಧ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ನೋಡಿಕೊಳ್ಳುತ್ತಿದ್ದರು. ಇದೀಗ ಕಳೆದ ಒಂದು ತಿಂಗಳಿನಿಂದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ಪ್ರವಾಸಿಗರಿಗೆ ಪ್ರವೇಶ ನಿರಾಕರಿಸುತ್ತಿದ್ದಾರೆ . ಇನ್ನು ಇಲ್ಲಿ ಬಹುತೇಕ ಒಣ ಹುಲ್ಲು ತುಂಬಿದ್ದು ಅಲ್ಲಿಗೆ ಬಂದ ಪ್ರವಾಸಿಗರು ಈ ಒಣಗಿದ ಹುಲ್ಲಿಗೆ ಬೆಂಕಿ ಹಾಕುತ್ತಾರೆ. ಇದರಿಂದ ಇಡೀ ಅರಣ್ಯಕ್ಕೆ ಬೆಂಕಿ ಆವರಿಸುವ ಭಯವಿದ್ದು, ಒಂದೆರಡು ಬಾರಿ ಈ ರೀತಿ ಬೆಂಕಿ ಹಚ್ಚಿದ ಕಾರಣದಿಂದಾಗಿ ಮತ್ತು ಅರಣ್ಯ ಸಂರಕ್ಷಣೆಯ ಉದ್ದೇಶದಿಂದ ಇಲ್ಲಿಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಮಳೆ ಬರುವವರೆಗೆ ಈ ನಿಷೇಧ ಮುಂದುವರಿಯಲಿದ್ದು, ಮುಂದಿನ ಮೇ ತಿಂಗಳ ವೇಳೆಗೆ ಒಂದೆರಡು ಮಳೆ ಸುರಿದ ಬಳಿಕ ಹಿಂದಿನಂತೆ ಪ್ರವೇಶ ನೀಡಲಾಗುವುದು ಎಂದು ಇಲಾಖೆ ಸ್ಪಷ್ಟನೆಯನ್ನು ನೀಡಿದೆ.